26 ಬಿಜೆಪಿ ಸಂಸದರಿದ್ದರೂ ರಾಜ್ಯ ಅತಿದೊಡ್ಡ ಲೂಸರ್ ನಂತೆ ಕಾಣಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ

Public TV
1 Min Read
PRIYAK KHARGE

ಕಲಬುರಗಿ: 26 ಬಿಜೆಪಿ ಸಂಸದರಿದ್ದರೂ ನಮ್ಮ ರಾಜ್ಯ ಅತಿದೊಡ್ಡ ಲೂಸರ್ ನಂತೆ ಕಾಣಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಬಜೆಟ್ ಕುರಿತು ಕಿಡಿಕಾರಿದ್ದಾರೆ.

ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಅವರು, ಈ ಬಾರಿಯ ಕೇಂದ್ರ ಬಜೆಟ್ ರಾಜ್ಯಕ್ಕೆ ನಿರಾಶೆ ಮೂಡಿಸಿದೆ. ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಆದರೆ ತೆರಿಗೆಗೆ ಪ್ರತಿಯಾಗಿ ನಮಗೆ ಏನೂ ಪಾವತಿಯಾಗಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಭಾರೀ ನಿರೀಕ್ಷೆ ಇತ್ತು. 26 ಬಿಜೆಪಿ ಸಂಸದರಿದ್ದರೂ ಬಜೆಟ್‍ನಲ್ಲಿ ರಾಜ್ಯವು ಸೋತಂತೆ ಆಗಿದೆ ಎಂದು ಹೇಳಿದ್ದಾರೆ.

ಸಮಾನತೆಯನ್ನು ಸಾರಿದ ಬಸವಣ್ಣನವರ ಹೆಸರನ್ನು ಬಜೆಟ್ ಮಂಡನೆಯ ಸಂದರ್ಭದಲ್ಲಿ ವಿತ್ತ ಸಚಿವರು ಉಲ್ಲೇಖ ಮಾಡಿದ್ದು ಸ್ವಾಗತಾರ್ಹ. ಆದರೆ ನಿರ್ಮಲಾ ಸೀತಾರಾಮನ್ ಅವರು ಬಸವಣ್ಣನವರ ಮೂಲ ಆಶಯವಾಗಿದ್ದ ಸಮಬಾಳು ತತ್ವಕ್ಕೆ ಅನುಗುಣವಾಗಿ ತಾವು ಪ್ರತಿನಿಧಿಸಿರುವ ನಾಡಿನ ಜನತೆಗೆ ಯಾವುದೇ ಕಾರ್ಯಕ್ರಮಗಳನ್ನು ನೀಡದಿರುವುದು ನಿರಾಸೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಬಜೆಟ್ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಆದರೆ ಈ ಬಾರಿ ಬಜೆಟ್‍ನಲ್ಲಿ ಬೆಲೆ ಇಳಿಕೆಗಿಂತ ಬೆಲೆ ಏರಿಕೆಯಾಗಿದೆ. ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ಸಂಕ್ಷಿಪ್ತವಾಗಿದೆ. ಎಲ್ಲವೂ ಸೂರ್ಯನ ಕೆಳಗಿದೆ. ಆದರೆ ಯಾವುದೂ ಕೈಗೆ ಸಿಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.

“ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಕೇಂದ್ರ ಬಜೆಟ್ ನರೇಂದ್ರ ಮೋದಿ ಸರ್ಕಾರದ ಹುಸಿ ಹೆಗ್ಗಳಿಕೆಗಳ ಮಹಾಪೂರದ ಗುಚ್ಚ. ರೈತರು, ಬಡವರು ಮಧ್ಯಮ ವರ್ಗಗಳಿಗೆ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಗುರುತರ ಹೊಸ ಯೋಜನೆಗಳಿಲ್ಲ. 2030ಕ್ಕೆ ಏನಾಗಬಹುದೆಂಬ ಊಹೆಗಿಂತ 2019ರಲ್ಲಿ ಏನು ದೇಶಕ್ಕೆ ಕೊಡುವಿರಿ ಎಂಬುದರ ಸ್ಪಷ್ಟತೆ ಇಲ್ಲ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *