ಲಕ್ನೋ: ಕನ್ವರ್ ಯಾತ್ರೆ ಸಂದರ್ಭದಲ್ಲಿ ಡಿಜೆಗಳ ಮೇಲೆ ಯಾವುದೇ ನಿಷೇಧವಿಲ್ಲ. ಆದರೆ ಭಜನೆಯ ಹಾಡುಗಳನ್ನು ಮಾತ್ರ ಹಾಕಬೇಕು. ಸಿನಿಮಾ ಹಾಡುಗಳಿಗೆ ಅವಕಾಶ ಕೊಡಬೇಡಿ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪೊಲೀಸರಿಗೆ ಆದೇಶ ಹೊರಡಿಸಿದ್ದಾರೆ.
ಸಿಎಂ ಯೋಗಿ ಆದಿತ್ಯ ಅವರು ಲಕ್ನೋದ ಲೋಕ್‍ಭವನದಲ್ಲಿ ಬುಧವಾರ ಕನ್ವರ್ ಯಾತ್ರೆಯ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಭದ್ರತೆ, ಮೂಲ ಸೌಕರ್ಯಗಳ ಪೂರೈಕೆ ಸಂಬಂಧ ಅಧಿಕಾರಿಗಳಿಗೆ ಅನೇಕ ಆದೇಶಗಳನ್ನು ನೀಡಿದ್ದಾರೆ.
ಯಾತ್ರಾ ಮಾರ್ಗದಲ್ಲಿ ಬರುವ ಶಿವನ ದೇವಾಲಯಗಳನ್ನು ಸ್ವಚ್ಛವಾಗಿಡಬೇಕು. ಯಾತ್ರೆಯ ಸಮಯದಲ್ಲಿ ಭಕ್ತರಿಗೆ ವಿದ್ಯುತ್, ನೀರು ಹಾಗೂ ಭದ್ರತೆಯನ್ನು ಒದಗಿಸಬೇಕು. ಕನ್ವರ್ ಹಬ್ಬದ ಅವಧಿಯಲ್ಲಿ ನಿಷೇಧಿತ ಪ್ರಾಣಿಗಳನ್ನು ಹತ್ಯೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೂ ಸಿಎಂ ಸೂಚನೆ ನೀಡಿದ್ದಾರೆ.
ಕನ್ವರ್ ಯಾತ್ರೆಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದ್ದು, ಶಿವನ ಲಕ್ಷಾಂತರ ಭಕ್ತರು ಹೆಚ್ಚಾಗಿ ಕಾಲ್ನಡಿಗೆಯ ಮೂಲಕ ಉತ್ತರಾಖಂಡದ ಹರಿದ್ವಾರ, ಗೌಮುಖ್ ಮತ್ತು ಗಂಗೋತ್ರಿಗೆ ಆಗಮಿಸುತ್ತಾರೆ. ಕೆಲವರು ಗಂಗಾ ನದಿಯ ಪವಿತ್ರ ನೀರನ್ನು ತರಲು ಬಿಹಾರದ ಸುಲ್ತಂಗಂಜ್‍ಗೆ ಪ್ರಯಾಣಿಸುತ್ತಾರೆ.