ಹಾಸನ: ಸರ್ಕಾರಿ ಯೋಜನೆಯ ಅನ್ವಯ ವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ನಗರ ಖಾಸಗಿ ಆಸ್ಪತ್ರೆ ಅಮಾನುಷವಾಗಿ ನಡೆಸಿಕೊಂಡಿದೆ.
ನಗರದ ಬಿಎಂ ರಸ್ತೆಯಲ್ಲಿ ಇರುವ ವರ್ಧಮಾನ್ ಜೈನ್ ಹೆಸರಿನ ಆಸ್ಪತ್ರೆ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯದ ನರ್ಸಿಂಗ್ ಹೋಂ ಈ ಅಚಾತುರ್ಯ ನಡೆಸಿ ಇದೀಗ ಸಿಕ್ಕಿಬಿದ್ದಿದೆ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯ ಕ್ಯಾಂಪ್ ನಡೆಸಿ ವಯೋವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆ ತರಲಾಗಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಯಾವುದೇ ಮಂಚ, ದಿಂಬು ಹೊದಿಕೆ ಇಲ್ಲದೆ ಅಮಾನುಷವಾಗಿ ನೋಡಿಕೊಳ್ಳಲಾಗಿದೆ.
ಸಿಬ್ಬಂದಿ ನಡವಳಿಕೆಯಿಂದ ಅಸಮಧಾನಗೊಂಡ ರೋಗಿಯ ಕಡೆಯವರು ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬಂದು ವಿಚಾರಿಸಿದಾಗ ನರ್ಸಿಂಗ್ ಹೋಂ ಸ್ಥಳೀಯ ಆಡಳಿತದ ಅನುಮತಿ ಪಡೆಯದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಮಂಡ್ಯ ಜಿಲ್ಲೆಯ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಹಾಸನದಲ್ಲಿ ಕ್ಯಾಂಪ್‍ಗಳನ್ನು ನಡೆಸಿ ಈ ರೀತಿ ಯಾವುದೇ ಸೌಕರ್ಯ ಇಲ್ಲದೆ ವಯೋವೃದ್ಧರ ಶಸ್ತ್ರ ಚಿಕಿತ್ಸೆ ನಡೆಸುತಿದ್ದ ನರ್ಸಿಂಗ್ ಹೋಂಗೆ ಬಾಗಿಲು ಮುಚ್ಚಿಸಲಾಗಿದೆ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಎಲ್ಲಾ ರೋಗಿಗಳನ್ನು ಸದ್ಯ ಅಂಬುಲೆನ್ಸ್ ಗಳ ಮೂಲಕ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಲ್ಲದೆ ನರ್ಸಿಂಗ್ ಹೋಂ ಮಾಲೀಕರಿಗೆ ಆರೋಗ್ಯ ಇಲಾಖೆಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.