ಧಾರವಾಡ: ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು 25 ರೂ.ಗೆ ಮಾರಿ, ಈಗ ಕಂದಮ್ಮನಿಗಾಗಿ ಕಣ್ಣೀರು ಹಾಕುತ್ತಿರುವ ಮನಕಲುಕುವ ಘಟನೆ ನಗರದಲ್ಲಿ ನಡೆದಿದೆ.
ರೇಖಾ ನರೇಂದ್ರ ಚಾವಲಾ ಮಗು ಮಾರಾಟ ಮಾಡಿ ಪರದಾಡಿದ ತಾಯಿ. ನಗರದ ಮಾಳಮಡ್ಡಿಯಲ್ಲಿ ಕಳೆದ ತಿಂಗಳು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರೇಖಾ ಚಾವಲಾ ಕಳೆದ ಜೂನ್ 20ರಂದು ತೌಹಿದ್ ಶೇಖ್, ಆಸ್ಮಾ ಮತ್ತು ಉಜ್ಮಾ ಎಂಬವರಿಗೆ 25 ಸಾವಿರ ರೂ. ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಳು. ನಂತರ ಮಗು ನೆನಪಾಗಿ ವಾಪಸ್ ಕೇಳಿದಾಗ, ಮಗು ಖರೀದಿಸಿದ್ದ ಮೂವರು ಮಗುವಿಗೆ ಖರ್ಚು ಮಾಡಿದ್ದ 8 ಸಾವಿರ ರೂ. ಹಾಗೂ ತಾವು ನೀಡಿದ್ದ 25 ಸಾವಿರ ರೂ. ಹಣ ಕೇಳಿದ್ದಾರೆ. ತನ್ನ ಬಳಿ ಹಣವಿಲ್ಲದ ಕಾರಣ ಮಗುವನ್ನು ವಾಪಸ್ ಪಡೆಯಲು ರೇಖಾಗೆ ಸಾಧ್ಯವಾಗಿರಲಿಲ್ಲ.
ಈ ಸಂಬಂಧ ರೇಖಾ ಮಕ್ಕಳ ರಕ್ಷಣಾ ಘಟಕಕ್ಕೆ ಹೋಗಿ ದೂರು ನೀಡಿದ್ದಾರೆ. ನಂತರ ಧಾರವಾಡ ವಿದ್ಯಾಗಿರಿ ಪೊಲೀಸರ ಸಹಾಯದಿಂದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ವಾಪಸ್ ಪಡೆದು, ಮಗು ಖರೀದಿ ಮಾಡಿದ್ದ ಮೂವರನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ.
ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಮಗು ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.