ಬೆಂಗಳೂರು: ಆಪರೇಷನ್ ಆಷಾಢಕ್ಕೆ ದೋಸ್ತಿ ಸರ್ಕಾರ ಬೆಚ್ಚಿಬಿದ್ದಿದೆ. ಸಂಪುಟ ವಿಸ್ತರಿಸಿ ಇಬ್ಬರು ಪಕ್ಷೇತರರನ್ನು ಮಂತ್ರಿ ಮಾಡಿ ಸದ್ಯಕ್ಕೆ ಸರ್ಕಾರ ಸುಭದ್ರ ಎಂದು ಭಾವಿಸಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸೋಮವಾರ ಬೆಳಗ್ಗೆ ವಿಜಯನಗರ ಶಾಸಕ ಆನಂದ್ ಸಿಂಗ್ ಶಾಕ್ ಕೊಟ್ಟರು. ಬಳಿಕ ಆರಂಭದಿಂದಲೂ ಅತೃಪ್ತ ಶಾಸಕರ ನಾಯಕತ್ವ ವಹಿಸಿದ್ದ ಶಾಸಕ ರಮೇಶ್ ಜಾರಕಿಹೊಳಿಯೂ ಸ್ಪೀಕರ್‍ಗೆ ರಾಜೀನಾಮೆ ಕಳುಹಿಸಿಕೊಟ್ಟಿದ್ದಾರೆ.
ಮೈತ್ರಿ ಸರ್ಕಾರವನ್ನು ಬೀಳಿಸುವ ಆಪರೇಷನ್ ಕಮಲದ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಕರ್ನಾಟಕದ ಬಿಜೆಪಿ ನಾಯಕರಿಗೆ ಕಟ್ಟಪ್ಪಣೆ ಹೊರಡಿಸಿದ್ದರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ. ಆದ್ರೆ ಸದ್ದೇ ಇಲ್ಲದಂತೆ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ತಂತ್ರಗಾರಿಕೆ ನಡೆಯುತ್ತಲೇ ಇತ್ತು. ಇದರ ಭಾಗವಾಗಿಯೇ ಐದು ದಿನಗಳಿಂದ ಮುಂಬೈನಲ್ಲೇ ಉಳಿದುಕೊಂಡಿದ್ದರು ಜಾರಕಿಹೊಳಿ.
ಆನಂದ್ ಸಿಂಗ್ ಬಳಿಕ ರಾಜೀನಾಮೆ ಕೊಟ್ಟು ಜಾರಕಿಹೊಳಿ ಆಪರೇಷನ್ ಯಶಸ್ಸು ಆಗಲಿ ಎಂದು ಮುನ್ನುಡಿ ಬರೆದಿದ್ದಾರೆ ಎನ್ನಲಾಗುತ್ತಿದೆ. ಇವತ್ತು ಮುಂಬೈನಿಂದ ವಾಪಸ್ಸಾಗಲಿರುವ ಬೆಳಗಾವಿಯ ಸಾಹುಕಾರ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಕೊಡಲಿದ್ದಾರೆ.
ಇಬ್ಬರು ಶಾಸಕರ ರಾಜೀನಾಮೆ ಕಾಂಗ್ರೆಸ್‍ನಲ್ಲಿ ತಲ್ಲಣ ಸೃಷ್ಟಿಸಿದ್ದು ಸರ್ಕಾರವನ್ನು ಉಳಿಸಲು ಎರಡು ತಂತ್ರಗಳನ್ನು ಹೆಣೆದಿದೆ. ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡುವುದು ಕಾಂಗ್ರೆಸ್‍ನ ಸದ್ಯದ ತಂತ್ರ. ಅದಕ್ಕಾಗಿ ತನ್ನ ಕೋಟಾದಲ್ಲಿ ಮಂತ್ರಿ ಆಗಿರುವ ಐವರು ಮಂತ್ರಿಗಳಿಗೆ ರಾಜೀನಾಮೆ ನೀಡುವಂತೆ ಕೇಳುವ ಸಾಧ್ಯತೆ ಇದೆ.
ರಿವರ್ಸ್ ಆಪರೇಷನ್: ಇದಲ್ಲದೇ ಬಿಜೆಪಿ ಬಿಟ್ಟು ಬರಲು ಸಿದ್ಧರಾಗಿರುವ ಶಾಸಕರಿಗೆ ಗಾಳ ಹಾಕಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಈ ಮೂಲಕ ಆಪರೇಷನ್ ಕಮಲದ ಹೊಡೆತಕ್ಕೆ ಪ್ರತಿ ಹೊಡೆತ ಕಾಂಗ್ರೆಸ್ ಲೆಕ್ಕಚಾರ ಹಾಕಿಕೊಂಡಿದೆ.
ದಳದಿಂದಲೂ ರಾಜೀನಾಮೆ: ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ಶಾಸಕರು ಕೂಡಾ ರಾಜೀನಾಮೆ ಕೊಡುವ ಸಾಧ್ಯತೆ ಇದೆ. ತಮ್ಮದೇ ಪಕ್ಷದ ನಾಲ್ಕೈದು ಶಾಸಕರ ಬಗ್ಗೆ ದೇವೇಗೌಡರಿಗೆ ಅನುಮಾನ ಕಾಡುತ್ತಿದೆ. ಪುತ್ರ ಅಮೆರಿಕ ಪ್ರವಾಸದಲ್ಲಿರುವ ಕಾರಣ ಈಗ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸ್ವತಃ ಗೌಡರೇ ಅಖಾಡಕ್ಕೆ ಧುಮುಕಿದ್ದಾರೆ. ಶಿರಾ ಶಾಸಕ ಸತ್ಯನಾರಾಯಣ, ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ, ಬೇಲೂರು ಶಾಸಕ ಲಿಂಗೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಹುಣಸೂರು ಶಾಸಕ ಎಚ್.ವಿಶ್ವನಾಥ್ ಬಗ್ಗೆ ಗೌಡರಿಗೆ ಸಂಶಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರಿಗೆ ಗೌಡರು ಇವತ್ತು ಬರುವಂತೆ ಬುಲಾವ್ ಕೊಟ್ಟಿದ್ದಾರೆ.