ಬೆಂಗಳೂರು: ಸಿನಿಮಾ ನಿರ್ಮಾಣವೆಂಬುದು ವ್ಯವಹಾರ. ಆದರೆ ನಿರ್ಮಾಪಕ ಅದನ್ನು ಬರೀ ಬ್ಯುಸಿನೆಸ್ ಅಂತಷ್ಟೇ ಪರಿಗಣಿಸಿದರೆ ಬಹುಶಃ ಅದ್ಭುತ ದೃಶ್ಯ ಕಾವ್ಯಗಳು ಹುಟ್ಟಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ, ಯಶಸ್ವಿ ಸಿನಿಮಾಗಳ ಹಿಂದೆ ಇಂಥಾ ವ್ಯಾವಹಾರಿಕ ಉದ್ದೇಶದಾಚೆಯ ಉತ್ಕಟ ಕಲಾ ಪ್ರೇಮವಿರುತ್ತದೆ. ನಿರ್ದೇಶಕರ ಕನಸಿಗೆ ಪ್ರತೀ ಹೆಜ್ಜೆಯಲ್ಲೂ ಸಾಥ್ ಕೊಡುತ್ತಾ, ಎಂಥಾ ಸವಾಲುಗಳು ಬಂದರೂ ಎದೆಕೊಡುತ್ತಾ ನಿರ್ಮಾಪಕ ಸಾಗಿ ಬಂದರೇನೇ ಸಿನಿಮಾವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತೆ. ಹೀಗೆ ಸ್ವತಃ ದೊಡ್ಡ ಮಟ್ಟದ ವ್ಯಾಪಾರ ಉದ್ಯಮದ ವಾರಸುದಾರರಾಗಿದ್ದರೂ ಸಿನಿಮಾವನ್ನು ಆರಾಧಿಸುವ ಸ್ವಭಾವದ ಉದಯ್ ಮೆಹ್ತಾರ ಏಳನೇ ಕನಸು ‘ಸಿಂಗ’!
ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿರೋ ಈ ಚಿತ್ರವನ್ನು ಈ ಹಿಂದೆ ರಾಮ್ ಲೀಲಾ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ರೂಪಿಸಿದ್ದಾರೆ. ಯಾವುದೇ ಚಿತ್ರ ಬಿಡುಗಡೆ ಪೂರ್ವದಲ್ಲಿ ಈ ಥರದ ಟಾಕ್ ಕ್ರಿಯೇಟ್ ಮಾಡಿದರೆ ಗೆಲುವು ಗ್ಯಾರಂಟಿ. ಅಂಥಾದ್ದೊಂದು ಸಕಾರಾತ್ಮಕ ವಾತಾವರಣದೊಂದಿಗೆ ಥೇಟರಿನ ಹಾದಿಯಲ್ಲಿರೋ ಸಿಂಗನನ್ನು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡಲು ಒಪ್ಪಿಕೊಂಡಿರೋದೇ ಕಥೆಯ ಕಾರಣದಿಂದ.
ಅಷ್ಟಕ್ಕೂ ಎಲ್ಲ ದಿಕ್ಕಿನಿಂದಲೂ ಕಥೆ ಒಪ್ಪಿಗೆಯಾಗದೇ ಇದ್ದರೆ ಉದಯ್ ಮೆಹ್ತಾ ನಿರ್ಮಾಣಕ್ಕಿಳಿಯುವವರೇ ಅಲ್ಲ. ಅವರು ಎಂಥಾ ಟೇಸ್ಟು ಹೊಂದಿದ್ದಾರೆ, ಗುಣಮಟ್ಟವನ್ನು ಹೇಗೆಲ್ಲ ಬಯಸುತ್ತಾರೆಂಬುದಕ್ಕೆ ಅವರೇ ನಿರ್ಮಾಣ ಮಾಡಿರೋ ಆರು ಚಿತ್ರಗಳೇ ಸಾಕ್ಷಿಗಿವೆ. ವಿಜಯ್ ಕಿರಣ್ ಆರಂಭದಲ್ಲಿ ಈ ಕಥೆ ಹೇಳಿದಾಗ ಒಂದೇ ಗುಕ್ಕಿಗದು ಮೆಹ್ತಾರಿಗೆ ಹಿಡಿಸಿತ್ತಂತೆ.
ಪಕ್ಕಾ ಕಮರ್ಶಿಯಲ್ ಶೈಲಿಯ ಈ ಕಥೆ ಎಲ್ಲ ಅಂಶಗಳನ್ನೂ ಒಳಗೊಂಡು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿರೋದರಿಂದಲೇ ಮೆಹ್ತಾ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಇದೀಗ ಒಟ್ಟಾರೆಯಾಗಿ ಸಿಂಗ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಅವರಲ್ಲೊಂದು ತೃಪ್ತಿಯಿದೆ.
ಉದಯ್ ಮೆಹ್ತಾ ಮೂಲತಃ ಬೆಂಗಳೂರಿನವರೇ. ಆರಂಭ ಕಾಲದಿಂದಲೂ ಅವರಿಗೆ ಸಿನಿಮಾಗಳ ಮೇಲೆ ವಿಪರೀತ ಸೆಳೆತ. ಇಂಥಾ ಸಿನಿಮಾ ಒಲವನ್ನು ಕಾಪಾಡಿಕೊಂಡೇ ಮುಂದುವರೆದರೂ ಬದುಕಿನ ಅನಿವಾರ್ಯತೆ ಅವರನ್ನು ಡೈಮಂಡ್ ಮರ್ಚೆಂಟ್ ಆಗಿ ರೂಪಿಸಿತ್ತು. ಈ ಉದ್ಯಮದಲ್ಲಿ ಬಲು ಆಸ್ಥೆಯಿಂದ ತೊಡಗಿಸಿಕೊಂಡು ಯಶಸ್ವಿಯಾದ ಮೆಹ್ತಾ ಈಗ್ಗೆ ದಶಕಗಳ ಹಿಂದೆಯೇ ನಿರ್ಮಾಪಕರಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಹೀಗೆ ಒಂದೊಳ್ಳೆ ಪ್ರಾಜೆಕ್ಟಿಗೆ ಹುಡುಕುತ್ತಿದ್ದಾಗ 2009ರಲ್ಲಿ ಲೂಸ್ ಮಾದ ಯೋಗಿ ಅಭಿನಯದ ರಾವಣ ಎಂಬ ಚಿತ್ರದ ಮೂಲಕ ಅದಕ್ಕೆ ಅವಕಾಶ ಒದಗಿ ಬಂದಿತ್ತು.
ಆ ಚಿತ್ರ ಯಶ ಕಾಣುತ್ತಲೇ ನಿರ್ಮಾಪಕರಾಗಿ ಕಾಲೂರಿ ನಿಂತ ಉದಯ್ ಮೆಹ್ತಾ, ಕೃಷ್ಣನ್ ಲವ್ ಸ್ಟೋರಿ, ಕಿಚ್ಚ ಸುದೀಪ್ ಅಭಿನಯದ ಬಚ್ಚನ್, ನೀನಾಸಂ ಸತೀಶ್ ಅಭಿನಯದ ಲವ್ ಇನ್ ಮಂಡ್ಯ, ಶರಣ್ ಅಭಿನಯದ ರಾಜ ರಾಜೇಂದ್ರ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸಿಂಗ ಅವರ ಏಳನೇ ಚಿತ್ರ. ಈ ಚಿತ್ರ ಬಿಡುಗಡೆಯ ಹಾದಿಯಲ್ಲಿರುವಾಗಲೇ ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರವನ್ನೂ ಮೆಹ್ತಾ ಆರಂಭಿಸಿದ್ದಾರೆ. ಅದಾಗಲೇ ಧೃವ ಸರ್ಜಾರ ಚಿತ್ರವೊಂದನ್ನು ನಿರ್ಮಾಣ ಮಾಡಲು ತಯಾರಿಯನ್ನೂ ಆರಂಭಿಸಿದ್ದಾರೆ.
ಹೀಗೆ ಸಾಗಿ ಬಂದಿರುವ ಉದಯ್ ಮೆಹ್ತಾ ಈಗ ಕನ್ನಡದ ಸ್ಟಾರ್ ನಿರ್ಮಾಪಕರಾಗಿ ಹೊರ ಹೊಮ್ಮಿದ್ದಾರೆ. ಅವರೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆಂದರೆ ಗಾಂಧಿನಗರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅದಕ್ಕೆ ಕಾರಣ ಕಥೆಯನ್ನು ಆರಿಸಿಕೊಳ್ಳೋದರಲ್ಲಿ ಅವರಿಗಿರುವ ಜಾಣ್ಮೆ. ಸಿಂಗ ಕಥೆಯನ್ನೂ ಕೂಡಾ ಅವರು ಅದೇ ಮಾನದಂಡಗಳನ್ನು ಪ್ರಯೋಗಿಸಿ ಆರಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಗೆಲುವು ಕಾಣೋದರೊಂದಿಗೆ ತಮ್ಮ ಸಿನಿಮಾ ಬದುಕಿನ ಮಹತ್ವದ ಚಿತ್ರವಾಗಿ ದಾಖಲಾಗುತ್ತದೆ ಎಂಬ ಭರವಸೆ ಉದಯ್ ಮೆಹ್ತಾ ಅವರಲ್ಲಿದೆ. ಈಗ ಪ್ರೇಕ್ಷಕರ ವಲಯದಲ್ಲಿ ಸಿಂಗ ಪಸರಿಸಿರೋ ಕ್ರೇಜ್ ಮೆಹ್ತಾರ ನಂಬಿಕೆಗೆ ಮತ್ತಷ್ಟು ಇಂಬು ಕೊಡುವಂತಿದೆ.