ಮಂಡ್ಯ: ಜಿಲ್ಲೆಯ ಸೋಲಿನ ಸಿಟ್ಟು ಜೆಡಿಎಸ್ ನಾಯಕರಲ್ಲಿ ಇನ್ನೂ ಆರಿಲ್ಲ. ಸಚಿವ ಡಿ.ಸಿ ತಮ್ಮಣ್ಣ ಬೆನ್ನಲ್ಲೇ ಸಚಿವ ಪುಟ್ಟರಾಜು ಕೂಡ ಸಮಸ್ಯೆ ಹೇಳಿದ ಗ್ರಾಮಸ್ಥನ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಕೆರೆ ನೀರು ತುಂಬಿಸುವ ವಿಷಯವಾಗಿ ಸಚಿವ ಪುಟ್ಟರಾಜು ಮತ್ತು ಗ್ರಾಮಸ್ಥರೊಬ್ಬರ ನಡುವೆ ನಡೆದಿದೆ ಎನ್ನಲಾದ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸಭೆಯೊಂದರಲ್ಲಿ ಭಾಗವಹಿಸಿದ ಸಚಿವ ಪುಟ್ಟರಾಜು ವಿರುದ್ಧ ಗ್ರಾಮಸ್ಥರೊಬ್ಬರು ಕೆರೆಗೆ ನೀರು ತುಂಬಿಸುವ ವಿಚಾರವಾಗಿ ಆಕ್ರೋಶ ಹೊರಹಾಕಿದ್ದಾರೆ. ಸಮಸ್ಯೆ ಕೇಳುವ ಸಲುವಾಗಿಯೇ ನಿಮ್ಮ ಊರಿಗೆ ಬಂದಿದ್ದೇನೆ ಎಂದು ಸಚಿವರು ಹೇಳಿದರೂ ಗ್ರಾಮಸ್ಥ ಮತ್ತೆ ಗರಂ ಆಗಿದ್ದಾರೆ.
ಇದರಿಂದ ಕೆರಳಿದ ಸಚಿವ ಪುಟ್ಟರಾಜು, ಸಮಸ್ಯೆ ಕೇಳಲು ಬಂದಿದ್ದೇನೆ ಅಂದರೂ ಕೇಳುತ್ತಿಲ್ಲವಲ್ಲ ಯಾಕೆ. ನನ್ನನ್ನು ನಿಮ್ಮ ಊರಿಗೆ ಕರೆಸಿ ಅವಮಾನ ಮಾಡಲು ಹೀಗೆ ಕೂಗಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ಕೂಡ ತಮ್ಮ ಊರಿನ ವ್ಯಕ್ತಿಯನ್ನು ಊರಿಗೆ ಕರೆಸಿದಾಗ ಸಮಸ್ಯೆ ಹೇಳುವುದು ಬಿಟ್ಟು ಈ ರೀತಿ ಕೂಗಾಡಿ ಅವಮಾನ ಮಾಡಬಾರದು ಎಂದು ತಿಳಿ ಹೇಳಿದ್ದಾರೆ.
ಇಷ್ಟಾದರೂ ಇಬ್ಬರ ನಡುವಿನ ಮಾತಿನ ಚಕಮಕಿ ತಣ್ಣಗಾಗದಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇವಿಷ್ಟು ಘಟನೆಯ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಇಂದು ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದ್ದು ಎಂಬುದು ತಿಳಿದು ಬಂದಿಲ್ಲ.