ಕ್ಯಾಲಿಫೋರ್ನಿಯಾ: ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಯಲ್ಲಿ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್ ಸೇರುದಂತೆ ಜಗತ್ತಿನ ದೊಡ್ಡ ದೊಡ್ಡ ಎಂಎನ್‍ಸಿಗಳಲ್ಲಿ ಭಾರತೀಯರು ಮಿಂಚುತ್ತಿದ್ದಾರೆ. ಈಗ ಪ್ರತಿಷ್ಠಿತ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಸಾಬೀಹ್ ಖಾನ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಸ್ಮಾರ್ಟ್‍ಫೋನ್, ಪರ್ಸನ್ ಕಂಪ್ಯೂಟರ್ ಕ್ಷೇತ್ರದ ದೈತ್ಯ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷರಾಗಿ ಸಾಬೀಹ್ ಖಾನ್ ಅವರು ನೇಮಕವಾಗಿರುವುದು ಭಾರತದ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿದೆ.
ಮೂಲತಃ ಉತ್ತರ ಪ್ರದೇಶದ ರಾಂಪುರದವರಾದ ಸಾಬಿಹ್ ಖಾನ್ 1995ರಿಂದ ಆ್ಯಪಲ್ ಕಂಪನಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟು ವರ್ಷಗಳಿಂದ ಕಂಪನಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ, ಈಗ ಆಪರೇಷನ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಸಾಬಿಹ್ ಖಾನ್ ನೇಮಕವಾಗಿರುವುದಕ್ಕೆ ಆ್ಯಪಲ್ ಸಿಇಓ ಟಿಮ್ ಕುಕ್ ಬೇಷ್ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಸಾಬಿಹ್ ಖಾನ್ ಪರಿಶ್ರಮ ಅಸಾಮಾನ್ಯ ಎಂದು ಕುಕ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ.
ರಾಂಪುರದವರಾದ ಸಾಬಿಹ್ ಖಾನ್ ತಂದೆ ಸಯೀದ್ ಖಾನ್ ಸದ್ಯ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಸಾಬಿಹ್ ಕೂಡಾ ಬಾಲ್ಯವನ್ನು ಸಿಂಗಾಪುರದಲ್ಲಿಯೇ ಕಳೆದಿದ್ದು, ಅರ್ಥಶಾಸ್ತ್ರ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ. ಇನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಆ್ಯಪಲ್ ಪ್ರಾಡಕ್ಟ್ ಗಳ ಯೋಜನೆ, ಉತ್ಪಾದನೆ, ಪೂರೈಕೆ, ಲಾಜಿಸ್ಟಿಕ್ ಇತರೆ ಕೆಲಸಗಳ ಬಗ್ಗೆ ಮೇಲುಸ್ತುವಾರಿಯನ್ನು ಸಾಬಿಹ್ ಖಾನ್ ನೋಡಿಕೊಳ್ಳುತ್ತಾರೆ.
ವಿಶ್ವಾದ್ಯಂತ ಆ್ಯಪಲ್ ಕಂಪನಿಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಭಾರತೀಯರು ಸಾಧನೆ ಮಾಡಿದ್ದಾರೆ. ಈ ಸಾಲಿನಲ್ಲಿ ಸತ್ಯ ನಾದೆಲ್ಲಾ, ಸುಂದರ್ ಪಿಚೈ, ಥಾಮಸ್ ಕುರಿಯನ್ ಬಳಿಕ ಈಗ ಸಾಹಿಬ್ ಖಾನ್ ಕೂಡ ಸೇರಿಕೊಂಡಿದ್ದಾರೆ.
2014ರಲ್ಲಿ ಸ್ಟೀವ್ ಬಲ್ಮೇರ್ ಅವರಿಂದ ತೆರವಾದ ಮೈಕ್ರೋಸಾಫ್ಟ್ ಕಂಪನಿಯ ಸಿಇಓ ಸ್ಥಾನಕ್ಕೆ ಮಣಿಪಾಲದಲ್ಲಿ ಓದಿದ್ದ ಸತ್ಯಾ ನಾದೆಲ್ಲಾ ಆಯ್ಕೆಯಾಗಿದ್ದರು. ಅವರ ಬಳಿಕ 2015ರಲ್ಲಿ ಸುಂದರ್ ಪಿಚೈ ಟೆಕ್‍ನ ದೈತ್ಯ ಗೂಗಲ್ ಕಂಪನಿಯ ಸಿಇಓ ಆಗಿ ನೇಮಕವಾದರು. ಅವರ ನಂತರ ಕೇರಳ ಮೂಲದ ಥಾಮಸ್ ಕುರಿಯನ್‍ರನ್ನು ಗೂಗಲ್ ಕ್ಲೌಡ್‍ನ ಮುಖ್ಯಸ್ಥರಾಗಿ ನೇಮಕವಾದರು.