– ಮಾನವೀಯತೆ ಮೆರೆದ ಸಿಪಿಐ
ಬಳ್ಳಾರಿ: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಬ್ಬಿಣದ ಸರಳಿಗೆ ಸಿಲುಕಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಸವಾರನನ್ನು ಆಸ್ಪತ್ರೆಗೆ ಸೇರಿಸಿ ಸಿಪಿಐಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ನಗರದ ಪೋಲಾ ಪ್ಯಾರಾಡೈಸ್ ಹೋಟೆಲ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾರೆ. ನಿರಂಜನ (35) ಮೃತ ಸವಾರನಾಗಿದ್ದು, ಜಿಲ್ಲಾ ಗೃಹರಕ್ಷಕ ದಳ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆಗಿದ್ದೇನು?:
ನಿರಂಜನ ಅವರು ವಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೈಕ್ ಚಲಾಯಿಸಿಕೊಂಡು ಬಂದ ಅವರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಅಲ್ಲಿಯೇ ಇದ್ದ ಕಬ್ಬಿಣದ ಸರಳಿಗೆ ಸಿಲುಕಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸಿದ್ದರು. ಈ ವೇಳೆ ಘಟನಾ ಸ್ಥಳದಲ್ಲಿ ನೆರೆದಿದ್ದ ಕೆಲವರು ಮೊಬೈಲ್‍ಗಳಲ್ಲಿ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುವಲ್ಲಿ ನಿರತರಾಗಿದ್ದರೇ ಹೊರತು, ಯಾರೊಬ್ಬರೂ ರಕ್ಷಣೆಗೆ ಮುಂದಾಗಲಿಲ್ಲ.
ಘಟನಾ ಸ್ಥಳದ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ಕೌಲ್ ಬಜಾರ್ ಠಾಣೆಯ ಸಿಪಿಐ ಚಂದನಗೋಪಾಲ ಹಾಗೂ ಕಾರು ಚಾಲಕ ಗೋಪಾಲ ನಿರಂಜನ ಬಿದ್ದಿರುವುದನ್ನು ನೋಡಿದರು. ತಕ್ಷಣವೇ ನಿರಂಜನ ಅವರನ್ನು ಆಟೋದಲ್ಲಿ ಹಾಕಿಕೊಂಡು ವಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ನಿರಂಜನ ಸಾವನ್ನಪ್ಪಿದ್ದಾರೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನಿರಂಜನ ಅವರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಸಿಪಿಐ ಚಂದನ್‍ಗೋಪಾಲ ಹಾಗೂ ವಾಹನ ಚಾಲಕನು ಮಾನವೀಯತೆ ಮೆರೆದಿದ್ದಾರೆ.