ಚಾಮರಾಜನಗರ: ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವಾಹನ ಸವಾರರಿಗೆ ಗ್ರೀನ್ ಟ್ಯಾಕ್ಸ್‌ನ್ನು ನಿಗದಿ ಮಾಡಲಾಗುತ್ತದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ತದೇಶದ ಅರಣ್ಯ ಪ್ರದೇಶದಲ್ಲಿ ಸಂಚಾರ ಮಾಡುವ ವಾಹನಗಳಿಗೆ ಇನ್ನು ಮುಂದೆ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಪರಿಸರ ರಕ್ಷಣೆಯ ಉದ್ದೇಶದಿಂದ ಈ ಹೊಸ ನಿಯಮವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಬಾಲಚಂದರ್ ಅವರು ತಂದಿದ್ದಾರೆ.
ಈ ಪ್ರಸ್ತಾವನೆ ಚಾಮರಾಜನಗರ ಜಿಲ್ಲಾಧಿಕಾರಿ ಅವರ ಬಳಿ ಹೋಗಿದ್ದು, ಅವರ ಸಹಿ ಸಿಕ್ಕ ಬಳಿಕ ಈ ಒಂದು ಗ್ರೀನ್ ಟ್ಯಾಕ್ಸ್ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಚಾಲ್ತಿಗೆ ಬರಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಒಂದು ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಗ್ರೀನ್ ಟ್ಯಾಕ್ಸ್ ನಿಂದ ಅರಣ್ಯ ಸಂರಕ್ಷಣೆಯ ಜೊತೆಗೆ ಅರಣ್ಯ ಇಲಾಖೆಗೆ ಅಪಾರ ಆದಾಯವು ಕೂಡ ಬರಲಿದೆ.
ದ್ವಿಚಕ್ರ ವಾಹನಕ್ಕೆ 20, ನಾಲ್ಕು ಚಕ್ರ ವಾಹನ 30, ಭಾರೀ ಗಾತ್ರದ ವಾಹನಗಳಿಗೆ 50 ರೂಪಾಯಿಯನ್ನು ನಿಗದಿ ಮಾಡಲಾಗುತ್ತದೆ. ಇದರಲ್ಲಿ ಕರ್ನಾಟಕದ ವಾಹನಗಳಿಗೆ ಟ್ಯಾಕ್ಸ್ ನಲ್ಲಿ ರಿಯಾಯಿತಿ ಮಾಡಲಾಗುತ್ತದೆ. ಈಗಾಗಲೇ ತಮಿಳುನಾಡು, ಕೇರಳ, ಆಂಧ್ರ ಪ್ರದೇಶದ ಕೆಲ ಅರಣ್ಯ ಪ್ರದೇಶದಲ್ಲಿ ಈ ಗ್ರೀನ್ ಟ್ಯಾಕ್ಸ್ ಚಾಲ್ತಿಯಲ್ಲಿದೆ. ಇದೀಗ ಬಂಡೀಪುರ ಅರಣ್ಯ ಇಲಾಖೆಯಲ್ಲೂ ಈ ನಿಯಮವನ್ನು ಜಾರಿಗೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ.