ಬೆಂಗಳೂರು: ದೆಹಲಿಯ ಫ್ಲಾಟ್‍ನಲ್ಲಿ ಹಣ ಸಿಕ್ಕಿದ ಪ್ರಕರಣದಲ್ಲಿ ಆರೋಪ ಮುಕ್ತರನ್ನಾಗಿ ಮಾಡುವಂತೆ ಸಚಿವ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
2017ರ ಆಗಸ್ಟ್ ನಲ್ಲಿ ಡಿ.ಕೆ. ಶಿವಕುಮಾರ್ ಮನೆಯ ಮೇಲೆ ಐಟಿ ದಾಳಿ ಮಾಡಿತ್ತು. 2018 ರಲ್ಲಿ ಆಗಸ್ಟ್ ನಲ್ಲಿ ಐಟಿ ಇಲಾಖೆ ಡಿಕೆ ಶಿವಕುಮಾರ್ ಮೇಲೆ ನಾಲ್ಕನೇ ಪ್ರಕರಣ ದಾಖಲಿಸಿತ್ತು. 2018ರ ಸೆಪ್ಟೆಂಬರ್ 15ಕ್ಕೆ ಈ ಪ್ರಕರಣದಲ್ಲಿ ಡಿಕೆಶಿಗೆ ಜಾಮೀನು ಸಿಕ್ಕಿತ್ತು. ನಂತರ ವಿಶೇಷ ನ್ಯಾಯಾಲಯಕ್ಕೆ ಈ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು. ಈ ಹಿಂದೆ 3 ಪ್ರಕರಣದಿಂದ ಆರೋಪ ಮುಕ್ತರಾಗಿದ್ದ ಡಿ.ಕೆ ಶಿವಕುಮಾರ್ ಈ ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾ. ರಾಮಚಂದ್ರ ಹುದ್ದರ್ ಅವರು ಅರ್ಜಿಯನ್ನು ವಜಾಗೊಳಿಸಿದ್ದು, ಡಿಕೆಶಿಗೆ ಸಂಕಷ್ಟ ಎದುರಾಗಿದೆ.
ಏನಿದು ಕೇಸ್?
ಹವಾಲ, ಕಪ್ಪ ಹಾಗೂ ತೆರಿಗೆ ವಂಚನೆ ಆರೋಪ ಡಿಕೆಶಿ ಮೇಲಿದೆ. ಈ ಹಿನ್ನೆಲೆಯಲ್ಲಿ ಐಟಿ ಕಾಯಿದೆ ಸೆಕ್ಷನ್ 277, 278, 193, 199, 120 ಅಡಿ ದೂರು ದಾಖಲು ಮಾಡಿತ್ತು. ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ರಾಜೇಂದ್ರ ವಿರುದ್ಧವೂ ದೂರು ದಾಖಲಾಗಿತ್ತು. ಎಐಸಿಸಿಗೆ ಕೋಟ್ಯಂತರ ಹಣ ಪಾವತಿಸಿರುವ ಆರೋಪವೂ ಡಿಕೆಶಿ ಮೇಲಿದೆ. ಹವಾಲಾ ಚಟುವಟಿಕೆಯಲ್ಲಿ ಡಿಕೆಶಿ ಭಾಗಿ ಬಗ್ಗೆ ಐಟಿ ದೂರಿನಲ್ಲಿ ಉಲ್ಲೇಖ ಮಾಡಿತ್ತು.
ಇತ್ತ ದೆಹಲಿಯ 4 ಫ್ಲಾಟ್‍ಗಳ ಮೇಲೆ ಐಟಿ ಇಲಾಖೆ ದಾಳಿ ವೇಳೆ ಫ್ಲಾಟ್‍ಗಳಲ್ಲಿ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ದೆಹಲಿಯ ಫ್ಲಾಟ್ ಗಳಲ್ಲಿ ಸಿಕ್ಕ 41 ಲಕ್ಷ ರೂ. ನನ್ನದೆಂದು ಡಿಕೆಶಿ ಒಪ್ಪಿಕೊಂಡಿದ್ದರು. ಉಳಿದ 8.18 ಕೋಟಿ ರೂಪಾಯಿ ಮೂಲದ ಬಗ್ಗೆ ಐಟಿ ತನಿಖೆ ನಡೆಸುತ್ತಿದೆ.