– ಬಾತ್‍ರೂಮಿನಲ್ಲಿ ಲಾಕ್ ಆದ ಗಂಡ ಅರೆಸ್ಟ್
ಮುಂಬೈ: ಪತಿಯನ್ನು ಬಾತ್‍ರೂಮಿನಲ್ಲಿ ಲಾಕ್ ಮಾಡಿ ಮದುವೆಯಾದ ಮೂರೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ದಿಂಡೋಶಿಯಲ್ಲಿ ನಡೆದಿದೆ.
ಮೃತಳನ್ನು ರೂಪಾ ಕೃಷ್ಣಬಹದ್ದೂರ್ ವಿಶ್ವಕರ್ಮ (22) ಎಂದು ಗುರುತಿಸಲಾಗಿದೆ. ಈಕೆ ಶುಕ್ರವಾರ ಮಲಾಡ್‍ನ ವೈಧ್ಯ ಮಾರ್ಗ ಖಡಕ್ಪಾಡಾದಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಯುವತಿಯ ಸಹೋದರ ಪತಿ ರಾಜ್ ವಿರುದ್ಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ರಾಜ್ ವಿರುದ್ಧ ದೂರು ದಾಖಲಿಸಿಕೊಂಡು ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ?
ಘಟನೆಯ ದಿನದಂದು ರೂಪಾ ಪತಿ ರಾಜ್ ವಿಶ್ವಕರ್ಮ ಮನೆಯಲ್ಲೇ ಇದ್ದನು. ಹೀಗೆ ಮನೆಯಲ್ಲಿದ್ದ ಆತ ಬಾತ್ ರೂಮ್ ಗೆ ತೆರಳಿದಾಗ ರೂಪಾ ಹೊರಗಿನಿಂದ ಲಾಕ್ ಮಾಡಿದ್ದಾಳೆ. ಬಳಿಕ ಫ್ಯಾನ್‍ಗೆ ನೇಣು ಬಿಗಿದುಕೊಂಡಿದ್ದಾಳೆ. ಇತ್ತ ರಾಜ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಬಾಗಿಲು ಹೊರಗಿನಿಂದ ಲಾಕ್ ಮಾಡಲಾಗಿತ್ತು. ನಂತರ ಆತ ಪತ್ನಿ ರೂಪಾಳನ್ನು ಕರೆದಿದ್ದಾನೆ. ಆದರೆ ರೂಪಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ತಾನೇ ಬಾಗಿಲು ಮುರಿದು ಹೊರಗೆ ಬಂದಿದ್ದಾನೆ. ಆಗ ರೂಪಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ನೆರೆಮನೆಯವರ ಸಹಾಯದಿಂದ ಆತ ನಮಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣಕ್ಕೆ ಬಂದ ಪೊಲೀಸರು ರೂಪಾಳನ್ನು ಸಿದ್ದಾರ್ಥ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ರೂಪಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರೀತಿಸಿ ಮದ್ವೆಯಾಗಿದ್ದರು:
ರಾಜ್ ಮತ್ತು ರೂಪಾ ಇಬ್ಬರೂ ನೇಪಾಳ ಮೂಲದವರು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ರಾಜ್ ಅಂಧೇರಿಯ ನೃತ್ಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿ ರೂಪಾಳ ಪರಿಚಯವಾಗಿದೆ. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮೂರು ತಿಂಗಳ ಹಿಂದೆಯಷ್ಟೇ ನೇಪಾಳದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಮದುವೆಯಾದ ನಂತರ ದಂಪತಿ ಮುಂಬೈಗೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಇನ್ಸ್ ಪೆಕ್ಟರ್ ಎಂ.ಆರ್.ಶಿಂಧೆ ಹೇಳಿದ್ದಾರೆ.
ಆತ್ಮಹತ್ಯೆ ಸ್ಥಳದಲ್ಲಿ ‘ಇದು ನನ್ನ ತಪ್ಪು ಮತ್ತು ನನ್ನ ತಪ್ಪು’ ಎಂದು ರೂಪಾ ಬರೆದಿರುವ ಡೆತ್‍ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮದುವೆಯ ನಂತರ ರಾಜ್‍ಗೆ ಅನೈತಿಕ ಸಂಬಂಧವಿತ್ತು. ಇದರಿಂದ ರೂಪಾ ಆತಂಕಗೊಂಡಿದ್ದಳು. ಹೀಗಾಗಿ ರಾಜ್ ಮಾಡಿದ ದ್ರೋಹದಿಂದಾಗಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರೂಪಾ ಸಹೋದರ ಆರೋಪಿಸಿದ್ದಾರೆ.
ಸದ್ಯಕ್ಕೆ ಮೃತಳಾ ಸಹೋದರನ ದೂರಿನ ಆಧಾರದ ಮೇಲೆ ನಾವು ಆರೋಪಿ ರಾಜ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಜೊತೆಗೆ ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಶಿಂಧೆ ತಿಳಿಸಿದ್ದಾರೆ.