ಮಂಡ್ಯ: ತನ್ನ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಬರಬೇಕೆಂದು ಸೆಲ್ಫೀ ಡೆತ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಆರ್ ಪೇಟೆ ತಾಲೂಕು ಅಘಲಯ ಗ್ರಾಮದ ರಮೇಶ್ ಅವರ ನಿವಾಸಕ್ಕೆ ಇಂದು ಸಿಎಂ ಭೇಟಿ ನೀಡಲಿದ್ದಾರೆ.
ಪ್ರಸ್ತುತ ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ಮುಖ್ಯಮಂತ್ರಿ ರಸ್ತೆ ಮಾರ್ಗವಾಗಿ ಅಘಲಯ ಗ್ರಾಮವನ್ನು ತಲುಪಲಿದ್ದಾರೆ. ಅಘಲು ಗ್ರಾಮದಲ್ಲಿ ಮೃತ ರೈತ ರಮೇಶ್ ಅವರ ಕುಟುಂಬದವರನ್ನು ಭೇಟಿಯಾಗಿ ಸಿಎಂ ಸಾಂತ್ವನ ಹೇಳಲಿದ್ದಾರೆ.
ಮುಖ್ಯಮಂತ್ರಿ ಸಂತೆಬಾಚಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಸ್ಥಳೀಯ ರೈತರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ದಿನೇಶ್ ಅವರು ತಿಳಿಸಿದ್ದಾರೆ. ನಿಖಿಲ್ ಚುನಾವಣೆಯಲ್ಲಿ ಸೋತ ನಂತರ ಇದೇ ಮೊದಲ ಬಾರಿಗೆ ಸಿಎಂ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ.
ರೈತನ ಮನವಿ ಏನು?
ವಿಡಿಯೋದಲ್ಲಿ ಈ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸುವ ರೈತ ಸುರೇಶ್ ಅವರು, ಕರ್ನಾಟಕ ಜನಪ್ರಿಯ ಸಿಎಂ ಆಗಿರುವ ನೀವು ನನ್ನ ಅಂತಿಮ ದರ್ಶನಕ್ಕೆ ಬರಬೇಕು. ಈ ವೇಳೆ ಕೇವಲ ಆಶ್ವಾಸನೆಯನ್ನು ನೀಡದೆ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಂಬಿಕೆ ಹೊಂದಿದ್ದೇನೆ. ಈ ಭಾಗದಲ್ಲಿ ಮೊದಲು 150 ಅಡಿಗೆ ನೀರು ಲಭ್ಯವಾಗುತ್ತಿತ್ತು. ಆದರೆ ಈಗ 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಈ ಭಾಗದ ಕೆರೆ ಕುಂಟೆಗಳನ್ನು ತುಂಬುವಂತೆ ಮಾಡಿ ರೈತರ ಸಮಸ್ಯೆ ಬಗೆ ಹರಿಸಿ. ಈ ಭಾಗದಲ್ಲಿ ಕೆಲ ವರ್ಷಗಳಿಂದ ಬರಗಾಲ ಇರುವುದರಿಂದ ಹೆಚ್ಚಿನ ಸಮಸ್ಯೆ ಆಗಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡದೆ ನೀರು ಕೊಟ್ಟು ನ್ಯಾಯ ನೀಡಿ. ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ತುಂಬಿಸಿ, ರೈತರನ್ನು ಕಾಪಾಡಿ ಆ ಮೂಲಕ ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ಮಾಡಲಿ ಎಂದು ರೈತ ಮನವಿ ಮಾಡಿಕೊಂಡಿದ್ದರು.
ಅಂದಹಾಗೇ ಭಾನುವಾರ ಬೆಳಗ್ಗೆ ಜಮೀನಿನ ಬಳಿ ರೈತ ಸುರೇಶ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಅಂತ್ಯ ಸಂಸ್ಕಾರವನ್ನು ನಡೆಸಲಾಗಿತ್ತು. ಆ ಬಳಿಕ ವಿಡಿಯೋ ಕುಟುಂಬಸ್ಥರ ಕೈಗೆ ಲಭಿಸಿತ್ತು. ಕೆಆರ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.