ಬಾಗಲಕೋಟೆ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಪ್ರತಿಭಟನೆಗೆ ಕರೆಕೊಟ್ಟಿದ್ದು, ರಾಜ್ಯದಲ್ಲೂ ವೈದ್ಯಕೀಯ ಸೇವೆ ವ್ಯತ್ಯಯವಾಗಲಿದೆ. ಆದರೆ ಬಾಗಲಕೋಟೆ ಸರ್ಕಾರಿ ವೈದ್ಯರು ಮಾತ್ರ ಕಡ್ಡಾಯವಾಗಿ ಕರ್ತವ್ಯಕ್ಕೆ ಬರಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ಹೊರಡಿಸಿದ್ದಾರೆ.
ವೈದ್ಯರ ಮೇಲೆ ಹಲ್ಲೆಗೆ ಖಂಡಿಸಿ ಇಂದು ರಾಜ್ಯಾದ್ಯಂತ ಮುಷ್ಕರ ನಡೆಸಲಾಗುತ್ತಿದೆ. ಆದರೆ ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ರಜೆ ಇಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅನಂತ್ ದೇಸಾಯಿ ಸೂಚನೆ ನೀಡಿದ್ದಾರೆ. ಜೊತೆಗೆ ಜಿಲ್ಲಾಸ್ಪತ್ರೆಯ ವೈದ್ಯರು ಕೂಡ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಿರಲು ಜಿಲ್ಲಾಸ್ಪತ್ರೆ ಸರ್ಜನ್ ಪ್ರಕಾಶ್ ಬಿರಾದಾರ ಅವರು ಕೂಡ ಸೂಚಿಸಿದ್ದಾರೆ. ಇದನ್ನೂ ಓದಿ:ಇಂದು ದೇಶಾದ್ಯಂತ ವೈದ್ಯರ ಮುಷ್ಕರ- ಆಸ್ಪತ್ರೆಗಳ ಓಪಿಡಿ ಬಂದ್
ಇಂದು ಬಾಗಲಕೋಟೆ ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆ ವೈದ್ಯರು ಮಾತ್ರ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ಸ್ತಬ್ಧವಾಗಿರುತ್ತದೆ. ಆದರೆ ತುರ್ತು ಚಿಕಿತ್ಸೆ ಮಾತ್ರ ತೆರೆದಿರುತ್ತದೆ. ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೂ ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಸ್ಥಗಿತವಾಗಿರುತ್ತದೆ.
ಅಲ್ಲದೆ ಇಂದು ಸಂಜೆ ಬಾಗಲಕೋಟೆ ಬಸವೇಶ್ವರ ವೃತ್ತದಲ್ಲಿ ಕ್ಯಾಂಡಲ್ ಲೈಟ್ ಮೂಲಕ ವೈದರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಭಾರತೀಯ ವೈದ್ಯಕೀಯ ಸಂಘ ಬಾಗಲಕೋಟೆ ಜಿಲ್ಲಾಧ್ಯಕ್ಷೆ ಜಯಶ್ರೀ ತಿಳಿಸಿದ್ದಾರೆ.