ಬೆಂಗಳೂರು: ನಾನು ಈ ಪಕ್ಷದಲ್ಲಿ ಇದ್ದೆ ಇರುತ್ತೀನಿ ಎಂದು ಹೇಳಲಿಕ್ಕೆ ಬರಲ್ಲ, ಹೋಗುತ್ತೀನಿ ಅಂತಾನು ಹೇಳಲ್ಲ. ಕಾಲಾಯ ತಸ್ಮೈ ನಮಃ. ಎಲ್ಲವನ್ನು ಕಾಲ ತೀರ್ಮಾನ ಮಾಡುತ್ತೆ ಎಂದು ಪಕ್ಷ ಬಿಡುವ ಮುನ್ಸೂಚನೆಯನ್ನು ಹೀರೇಕೆರೂರು ಶಾಸಕ ಬಿ.ಸಿ ಪಾಟೀಲ್ ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿ.ಸಿ. ಪಾಟೀಲ್ , ಕಾಂಗ್ರೆಸ್ ಪಕ್ಷ ಉಳಿಯುದಕ್ಕಿಂದ ಹೆಚ್ಚಾಗಿ ಸರ್ಕಾರ ಉಳಿದುಕೊಂಡರೆ ಸಾಕು ಎಂಬ ಸ್ಥಿತಿಗೆ ತಲುಪಿದೆ. ಪಕ್ಷ ಉಳಿದರೆ ಸರ್ಕಾರ, ಇಲ್ಲವಾದರೆ ಯಾವ ಸರ್ಕಾರನೂ ಉಳಿಯುದಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷ 28 ಸ್ಥಾನದಲ್ಲಿ 27 ಸ್ಥಾನವನ್ನು ಕಳೆದುಕೊಂಡು ಕೊನೆಯ ಘಟ್ಟ ತಲುಪಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರನ್ನ ಬಿಟ್ಟು ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷದ ವಿರುದ್ಧ ಗೆದ್ದು ಬಂದವರಿಗೆ ಅಧಿಕಾರ ಕೊಡುತ್ತಿದ್ದಾರೆ. ಪಕ್ಷದಲ್ಲಿ ದುಡಿದವರಿಗೆ ಗೌರವ ಕೊಡಲ್ಲ. ಈ ರೀತಿ ಆದರೆ ಸರ್ಕಾರ ಉಳಿಯುವದಿಲ್ಲ. ಪಕ್ಷ ಸರ್ಕಾರ ಬೀಳಲಿ ಅಂತಾನೆ ಈ ರೀತಿ ಮಾಡುತ್ತಿದ್ದಾರೆ ಎಂದರು.
ನನಗೆ ಯಾವ ಸಚಿವ ಸ್ಥಾನನೂ ಬೇಡ, ಯಾವ ನಿಗಮ ಮಂಡಳಿ ಬೇಡ. ಅತ್ತು ಕರೆದುಕೇಳುವ ಅಗತ್ಯ ನನಗಿಲ್ಲ. ನಾನು ಈ ಪಕ್ಷದಲ್ಲಿ ಇದ್ದೆ ಇರುತ್ತೀನಿ ಎಂದು ಹೇಳಲಿಕ್ಕೆ ಬರಲ್ಲ, ಹೋಗುತ್ತೀನಿ ಅಂತಾನು ಹೇಳಲ್ಲ. ಕಾಲಯ ತಸ್ಮೈನಮಃ. ಕಾಲ ತೀರ್ಮಾನ ಮಾಡುತ್ತೆ. ಅಸಮಾಧಾನ ಶಾಸಕರೆಲ್ಲಾ ಕುಳಿತುಕೊಂಡು ಮಾತಾಡುತ್ತಿದ್ದೀವಿ. ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪಕ್ಷ ಬಿಡುವ ಮುನ್ಸೂಚನೆಯನ್ನು ಬಿ.ಸಿ ಪಾಟೀಲ್ ನೀಡಿದ್ದಾರೆ.
ಈ ಹಿಂದೆಯೇ ಸಿದ್ದರಾಮಯ್ಯ ಅವರು ಸಚಿವ ಸ್ಥಾನ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೂ ನನಗೆ ಸ್ಥಾನ ಕೊಡಲಿಲ್ಲ. ಯಾಕೆ ಕೊಡಲಿಲ್ಲ ಎಂದು ಇದುವರೆಗೂ ಕಾಂಗ್ರೆಸ್ ನಾಯಕರು ಫೋನ್ ಮಾಡಿಯೂ ಹೇಳಿಲ್ಲ. ಬಹುಶಃ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಯಾರಿಗೂ ನೈತಿಕ ಧೈರ್ಯ ಇಲ್ಲದ್ದಂತಾಗಿದೆ. ನನ್ನ ಪಕ್ಷದಲ್ಲೆ ಯಾವುದೋ ಧ್ವನಿ ನನ್ನ ತುಳಿಯುವಂತ ಕೆಲಸ ಮಾಡುತ್ತಿದೆ ಅನ್ನಿಸುತ್ತಿದೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಅಸಮಾಧಾನ ಖಂಡಿತಾ ಇದೆ. ನಾನು ಕಷ್ಟ ಪಟ್ಟು ಬಂದವನು ಯಾರ ಬೆಂಬಲದಿಂದ ಈ ಸ್ಥಾನಕ್ಕೆ ಬಂದಿಲ್ಲ. ಪೊಲೀಸ್ ಆಗಿದ್ದವನು ರೈತರ ಸೇವೆಗಾಗಿ ಬಂದೆ. ಅನೇಕ ಬಾರಿ ಜೈಲಿಗೂ ಹೋಗಿ ಬಂದಿದ್ದೇನೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಒಂದು ಬಾರಿ ಗೆದ್ದವರಿಗೆ ಕರೆದುಕೊಂಡು ಬಂದು ಮಂತ್ರಿ ಮಾಡುತ್ತೀರಿ. ಮೂರು ಬಾರಿ ಗೆದ್ದವರನ್ನ ಕಡೆಗಣನೆ ಮಾಡುತ್ತೀರಿ ಇದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು.