-ಐಎಎಂ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನ
ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ನೀಡುವ ಪ್ರಕರಣದಲ್ಲಿ ರಾಜ್ಯ ಸರ್ಕಾರ ಈ ವಿಚಾರವನ್ನು ಉಪಸಮಿತಿಗೆ ನೀಡಿರೋದನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ಭಾನುವಾರ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ. ರಾಜ್ಯ ಸರ್ಕಾರ ಜನಕ್ಕೆ ಮೋಸ ಮಾಡುವುದನ್ನು ಮುಂದುವರೆಸಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ಜಿಂದಾಲ್ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ. ಆದರೆ ಈ ಸಭೆಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರವನ್ನು ಜೀವಂತವಾಗಿಡುವ ಕೆಲಸ ನಡೆದಿದೆ. ಮುಖ್ಯಮಂತ್ರಿ, ಸಿದ್ದರಾಮಯ್ಯ, ಕೆ.ಜೆ ಜಾರ್ಜ್ ಮತ್ತು ಡಿ.ಕೆ ಶಿವಕುಮಾರ್ ಸೇರಿ ಸರ್ಕಾರದ ಜಮೀನನ್ನು ಹಾಗೂ ರೈತರ ಜಮೀನಿನ ಶುದ್ಧ ಕ್ರಯಪತ್ರ ಜಿಂದಾಲ್‍ಗೆ ನೀಡಲು ಮುಂದಾಗಿದ್ದನ್ನು ಬಿಜೆಪಿ ವಿರೋಧಿಸುತ್ತದೆ ಎಂದರು.
ಇದೇ ವೇಳೆ ಐಎಂಎ ಪ್ರಕರಣದ ಬಗ್ಗೆ ಮಾತನಾಡಿ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್‍ಐಟಿಗೆ ನೀಡಿ ಮುಚ್ಚಿಹಾಕಲು ಮುಂದಾಗಿದೆ. ಪ್ರಮುಖ ಆರೋಪಿ ದೇಶದಲ್ಲೇ ಇಲ್ಲ ಎಂಬ ಮಾಹಿತಿ ಇದೆ. ಎಸ್‍ಐಟಿ ಹೊರದೇಶಕ್ಕೆ ಹೋಗಿ ತನಿಖೆ ಮಾಡುತ್ತಾ? ಈ ಕೇಸ್ ನ್ನು ಸಿಬಿಐಗೆ ಅಥವಾ ಇಡಿಗೆ ನೀಡಬೇಕು. ರಾಜ್ಯ ಸರ್ಕಾರ ಎಸ್‍ಐಟಿಗೆ ತನಿಖೆ ಮಾಡಲು ನೀಡಿ ಲಕ್ಷಾಂತರ ಮುಸ್ಲಿಂ ಜನರಿಗೆ ಅನ್ಯಾಯ ಮಾಡುತ್ತಿದೆ. ಜಮೀರ್ ಹಾಗೂ ರೋಷನ್ ಬೇಗ್ ಮಾತ್ರ ಈ ಪ್ರಕರಣದಲ್ಲಿ ಇಲ್ಲ ಇನ್ನೂ ಅನೇಕ ನಾಯಕರಿದ್ದಾರೆ ಎಂದು ಆರೋಪಿಸಿದರು.
ನಾನು ಮುಸ್ಲಿಂ ಬಾಂಧವರಲ್ಲಿ ವಿನಂತಿ ಮಾಡುತ್ತೇನೆ. ನೀವು ಈ ಸರ್ಕಾರದ ವಿರುದ್ಧ ಹೋರಾಟ ಮಾಡಿ. ಈ ಪ್ರಕರಣವನ್ನು ಸಮಗ್ರ ತನಿಖೆ ಮಾಡಲು ಸಿಬಿಐಗೆ ನೀಡವಂತೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.