ಪ್ರೀತಿ ಪ್ರೇಮವೆಲ್ಲ ಪುಸ್ತಕದ ಬದನೇಕಾಯಿ ಅನ್ನುತ್ತಲೇ ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಅದೇ ಪ್ರೀತಿಯ ನವಿರು ಭಾವಗಳ ಬ್ರಹ್ಮಾಂಡವನ್ನೇ ಪ್ರೇಕ್ಷಕರ ಬೊಗಸೆಗಿಟ್ಟು ಪುಳಕಗೊಳ್ಳುವಂತೆ ಮಾಡಿರುವವರು ನಿರ್ದೇಶಕ ಆರ್. ಚಂದ್ರು. ಪ್ರೀತಿಯನ್ನು ಬೇರೆಯದ್ದೇ ರೀತಿಯಲ್ಲಿ ಪರಿಭಾವಿಸುವ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಪಕ್ಕಾ ಲವ್ ಸಬ್ಜೆಕ್ಟ್ ಹೊಂದಿರುವ ‘ಐ ಲವ್ ಯೂ’ ಚಿತ್ರ ಮೂಡಿ ಬಂದಿದೆ ಅಂದರೆ ಅದರತ್ತ ಗಾಢವಾದ ಕುತೂಹಲ ಹುಟ್ಟಿಕೊಳ್ಳೋದು ಸಹಜ. ಈ ಚಿತ್ರವೀಗ ಬಿಡುಗಡೆಯಾಗಿದೆ. ಈವರೆಗೂ ಅದೆಂಥಾ ತೀವ್ರವಾದ ಕುತೂಹಲವನ್ನ ತನ್ನತ್ತ ಈ ಚಿತ್ರ ಕೇಂದ್ರೀಕರಿಸಿಕೊಂಡಿತ್ತೋ, ಅದಕ್ಕೆ ಸರಿಸಾಟಿಯಾದ ರೀತಿಯಲ್ಲಿಯೇ ಈ ಚಿತ್ರ ಮೂಡಿ ಬಂದಿದೆ.
ಕ್ಷಣ ಕ್ಷಣವೂ ಕಾತರಿಸುತ್ತಾ ಬಿಡುಗಡೆಯಾದಾಕ್ಷಣವೇ ಐ ಲವ್ ಯೂ ನೋಡಿದ ಪ್ರತೀ ಪ್ರೇಕ್ಷಕರಲ್ಲಿಯೂ ತೃಪ್ತ ಭಾವ ಮೂಡುವಂತೆ ಆರ್. ಚಂದ್ರು ಈ ಚಿತ್ರವನ್ನು ಅಣಿಗೊಳಿಸಿದ್ದಾರೆ. ಮಾತು ಕೊಟ್ಟಂತೆಯೇ ಫ್ಯಾಮಿಲಿ ಸಮೇತರಾಗಿ ಕೂತು ನೋಡುವಂಥಾ ಭರ್ಜರಿ ಎಂಟರ್‍ಟೈನ್ಮೆಂಟ್ ಪ್ಯಾಕೇಜನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ನಿರೀಕ್ಷೆಯಂತೆಯೇ ಇಡೀ ಕಥೆಯಲ್ಲಿಯೇ ಉಪ್ಪಿ ಮತ್ತು ಚಂದ್ರು ಅವರ ಶೈಲಿ ಮಿಳಿತವಾಗಿದೆ. ಅದು ಪ್ರೇಕ್ಷಕರನ್ನು ನೇರವಾಗಿಯೇ ತಾಕಿ ಪುಳಕಕ್ಕೊಡ್ಡುವಷ್ಟು ಶಕ್ತವೂ ಆಗಿದೆ. ಐ ಲವ್ ಯೂ ಎಂಬ ಶೀರ್ಷಿಕೆಗೆ ತಕ್ಕುದಾಗಿಯೇ ಗಾಢ ಪ್ರೇಮದ ಹಿನ್ನೆಲೆಯಲ್ಲಿಯೇ ಕಥೆ ಬಿಚ್ಚಿಕೊಳ್ಳುತ್ತದೆ. ಮಾಮೂಲು ಫಾರ್ಮುಲಾಕ್ಕಿಂತ ತುಸು ಭಿನ್ನವಾಗಿಯೇ ನಾಯಕ ಮತ್ತು ನಾಯಕಿಯ ಮುಖಾಮುಖಿಯೂ ಸಂಭವಿಸುತ್ತದೆ. ಉಪೇಂದ್ರ ಇಲ್ಲಿ ಸಂತೋಷ್ ಎಂಬ ಪಾತ್ರಕ್ಕೆ ಜೀವತುಂಬಿದರೆ, ರಚಿತಾ ರಾಮ್ ಧಾರ್ಮಿಕ ಎಂಬ ವಿಶಿಷ್ಟವಾದ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ.
ನಾಯಕ ನಾಯಕಿಯರಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುತ್ತಾರೆ. ನಾಯಕಿಯದ್ದು ಬದುಕಿನ ರಥದ ಗಾಲಿಗಳು ಕದಲುತ್ತಿರೋದೇ ಭಾವನೆಗಳಿಂದ ಅನ್ನುವಷ್ಟು ಸೆನ್ಸಿಟಿವ್ ವ್ಯಕ್ತಿತ್ವ. ಪ್ರೀತಿಯ ಬಗ್ಗೆಯೂ ಕೂಡಾ ಅದೇ ಭಾವನೆಯಿಂದಲೇ ಆಕೆ ಜೀವಿಸುತ್ತಿರುತ್ತಾಳೆ. ಧಾರ್ಮಿಕ ವಿಚಾರದಲ್ಲಿಯೇ ಪಿಎಚ್‍ಡಿ ಸಂಶೋಧನೆಯನ್ನೂ ನಡೆಸುತ್ತಿರುತ್ತಾಳೆ. ಅದೇ ಕಾಲೇಜಿನ ವಿದ್ಯಾರ್ಥಿಯಾಗಿರೋ ನಾಯಕನದ್ದು ತದ್ವಿರುದ್ಧ ಕ್ಯಾರೆಕ್ಟರ್. ಆತನ ಪ್ರಕಾರ ಈ ಪ್ರೀತಿ ಪ್ರೇಮ, ನವಿರು ಭಾವಗಳೆಲ್ಲ ಭ್ರಾಂತು. ಪ್ರೀತಿ ಅನ್ನೋದು ಕಾಮದ ಮೊದಲ ಹೆಜ್ಜೆ ಅನ್ನೋದು ಆತನ ಗಾಢವಾದ ನಂಬಿಕೆ.
ಇಂಥಾ ಎರಡು ಕ್ಯಾರೆಕ್ಟರುಗಳು ಎರಡು ಧ್ರುವಗಳಿದ್ದಂತೆ. ಆದರೆ ಭಾವನೆಗಳಿಗೆ ಬೆಲೆ ಕೊಡೋ ನಾಯಕಿಯ ಮೇಲೆ ನಾಯಕನಿಗೆ ಲವ್ವಾದರೆ ಅದು ಎರಡು ಧ್ರುವಗಳು ಡಿಕ್ಕಿ ಹೊಡೆದಂಥಾದ್ದೇ ಅನಾಹುತ. ಅಂಥಾದ್ದು ಚಿತ್ರದುದ್ದಕ್ಕೂ ಸಂಭವಿಸುತ್ತೆ. ಆದರೆ ಕಾಲೇಜು ಜೀವನದಲ್ಲಿ ಹಾಗೆಲ್ಲ ಭೋಳೇ ಮನಸ್ಥಿತಿ ಹೊಂದಿದ್ದ ನಾಯಕನಿಗೂ ಒಂದು ಫ್ಯಾಮಿಲಿ ಇರುತ್ತೆ. ಅಪ್ಪನ ಮಾತಿಗೆ ಕಟ್ಟು ಬಿದ್ದು ದೊಡ್ಡ ಉದ್ಯಮಿಯಾಗಿ ಬದಲಾಗೋ ಆತ ಅಪ್ಪನ ಮಾತಿನಂತೆಯೇ ಮದುವೆಯಾಗುತ್ತಾನೆ. ಮುದ್ದಾದ ಮಗುವೂ ಆಗುತ್ತೆ. ಆದರೆ ಅಷ್ಟೆಲ್ಲ ದೂರ ಕ್ರಮಿಸಿದರೂ ಕಾಲೇಜು ದಿನಗಳ ಧಾರ್ಮಿಕಳ ಮೇಲಿನ ಮೋಹ ಮಾತ್ರ ಮಾಸಿರೋದಿಲ್ಲ. ಅದು ಎಂತೆಂಥಾ ತಿರುವುಗಳನ್ನು ಪಡೆಯುತ್ತೆ ಅನ್ನೋದರ ಸುತ್ತಾ ಇಡೀ ಚಿತ್ರ ಸಾಗುತ್ತದೆ. ಇದರಲ್ಲಿಯೇ ಎಲ್ಲ ಭಾವಗಳನ್ನೂ ಕಟ್ಟಿಕೊಡುವ ಜಾಣ್ಮೆಯ ಮೂಲಕ ಇಡೀ ಚಿತ್ರವನ್ನು ರಸವತ್ತಾಗಿ ರೂಪಿಸುವಲ್ಲಿ ಆರ್ ಚಂದ್ರು ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಇಡೀ ಚಿತ್ರದಲ್ಲಿ ಕಥೆ, ಸನ್ನಿವೇಶ ಮತ್ತು ಪಾತ್ರ ಪೋಷಣೆ ಕಣ್ಣಿಗೆ ಕಟ್ಟುತ್ತದೆ. ಉಪೇಂದ್ರ, ರಚಿತಾ ರಾಮ್ ಮತ್ತು ಸೋನು ಗೌಡ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ತೆಲುಗು ನಟ ಬ್ರಹ್ಮಾನಂದ್ ಪಾತ್ರವೂ ಪ್ರೇಕ್ಷಕರ ಮನಸಿನಲ್ಲುಳಿಯುವಂತಿದೆ. ಇದೆಲ್ಲದರ ಜೊತೆ ಜೊತೆಗೇ ಈ ದಿನಮಾನದಲ್ಲಿ ಸಂಬಂಧಗಳೇ ಸವಕಲಾಗುತ್ತಿರೋ ದುರಂತದತ್ತಲೂ ಬೆಳಕು ಚೆಲ್ಲಿ ಅದರ ಮಹತ್ವ ಸಾರುವ ಪ್ರಯತ್ನವನ್ನೂ ಆರ್.ಚಂದ್ರು ಮಾಡಿದ್ದಾರೆ. ನಿಖರವಾಗಿ ಹೇಳಬೇಕೆಂದರೆ, ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ಪಕ್ಕಾ ಗೆದ್ದಿದೆ. ಈ ಮೂಲಕವೇ ಉಪ್ಪಿ ಫಿಲಾಸಫಿ ಮತ್ತೆ ಲಕಲಕಿಸಿದೆ. ಆರ್ ಚಂದ್ರು ಫ್ಲೇವರ್‍ಗೆ ಮತ್ತಷ್ಟು ರುಚಿ ಬಂದಿದೆ.
ಇದೆಲ್ಲದರಾಚೆಗೆ ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ಹೇಗೆ ನಟಿಸಿದ್ದಾರೆ, ಅದಕ್ಕಿರೋ ಕಾರಣವೇನು ಎಂಬೆಲ್ಲ ಪ್ರಶ್ನೆಗಳಿಗೆ ಈ ಚಿತ್ರದಲ್ಲಿ ಮಜವಾದ ಉತ್ತರವಿದೆ. ಬಹು ಕಾಲದ ನಂತರ ಫ್ಯಾಮಿಲಿ ಸಮೇತರಾಗಿ ಕೂತು ನೋಡುವಂಥಾ, ಎಲ್ಲ ವಯೋಮಾನದವರೂ ಎಂಜಾಯ್ ಮಾಡಬಹುದಾದ ಚಿತ್ರವಾಗಿ ಐ ಲವ್ ಯೂ ಮೂಡಿ ಬಂದಿದೆ. ಖಂಡಿತಾ ಎಲ್ಲರೂ ಮಿಸ್ ಮಾಡದೇ ನೋಡಿ ಅಂತ ಶಿಫಾರಸು ಮಾಡುವಂತೆ ಈ ಚಿತ್ರ ಮೂಡಿ ಬಂದಿದೆ.
ರೇಟಿಂಗ್: 4/5