ಹಾಸನ: ಗಾರ್ಡನ್ ಸ್ವಚ್ಛಗೊಳಿಸು ಎಂದು ಹೇಳಿದಕ್ಕೆ ಸಹಾಯಕನೋರ್ವ ಸೆಸ್ಕಾಂ ಎಇಇ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಹಾಸನದ ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆದಿದೆ.
ಸೆಸ್ಕಾಂ ಎಇಇ ಸ್ವಾತಿ ದೀಕ್ಷಿತ್ ಅವರ ಮೇಲೆ ಸ್ಟೇಷನ್ ಅಟೆಂಡೆಂಟ್ ಮಂಜುನಾಥ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದ ಗಾರ್ಡನ್ ಸ್ವಚ್ಛಗೊಳಿಸುವಂತೆ ಸ್ವಾತಿ ಅವರು ಮಂಜುನಾಥ್‍ಗೆ ಹೇಳಿದ್ದಾರೆ. ಆದರೆ ಈ ಚಿಕ್ಕ ವಿಷಯಕ್ಕೆ ಕೋಪಗೊಂಡ ಮಂಜುನಾಥ್, ಸ್ವಾತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡನಿಗೂ ಕೂಡ ಮಚ್ಚಿನೇಟು ಬಿದ್ದಿವೆ.
ಗಲಾಟೆಯಲ್ಲಿ ಸ್ವಾತಿ ಅವರ ಕುತ್ತಿಗೆ, ತಲೆಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಎರಡು ಬೆರಳು ತುಂಡಾಗಿದೆ. ಸದ್ಯ ಹಲ್ಲೆಗೊಳಗಾದ ಸಿಬ್ಬಂದಿ ಹಾಗೂ ಮಹಿಳಾ ಎಂಜಿನಿಯರ್ ಇಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಆರೋಪಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ನಗರಠಾಣೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.