ಬೀದರ್: ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಇಂದು ನಾರಂಜಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ ನಿವಾಸಕ್ಕೆ ನೂರಾರು ರೈತರು ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಿದರು.
ಹಲವು ತಿಂಗಳ ಒಟ್ಟು 24 ಕೋಟಿಯ ಕಬ್ಬಿನ ಬಿಲ್ ಬಾಕಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಉಳಿಸಿಕೊಂಡಿದ್ದು, ಕೂಡಲೇ ನಮ್ಮ ಕಬ್ಬಿನ ಬಿಲ್ ಬಾಕಿ ನೀಡಬೇಕು ಎಂದು ಆಗ್ರಹಸಿ ಪ್ರತಿಭಟನೆ ಮಾಡಲಾಯಿತು.
ಬೀದರ್‍ನ ಪ್ರಮುಖ ರಸ್ತೆಯಲ್ಲಿ ಬ್ಯಾನರ್ ಹಿಡಿದು ಮೆರವಣಿಗೆ ಬಂದ ರೈತರು ಕೆಎಚ್‍ಬಿ ಕಾಲೋನಿಯಲ್ಲಿರುವ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ, 15 ದಿನಗಳಲ್ಲಿ ಬಾಕಿ ಪಾವತಿ ಮಾಡುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ದಯಾನಂದ್ ಸ್ವಾಮಿ, ಕಳೆದ 3 ಮೂರು ವರ್ಷದಿಂದ ನಮ್ಮ ಜಿಲ್ಲೆಯಲ್ಲಿ ಬರಗಾಲ ಬಂದಿದೆ. ಕುಡಿಯಲು ನೀರಿಲ್ಲದ ಸಮಯದಲ್ಲಿ ಲಭ್ಯವಿರುವ ಸ್ವಲ್ಪ ನೀರನ್ನೇ ಉಪಯೋಗಿಸಿಕೊಂಡು ರೈತರು ಕಷ್ಟಪಟ್ಟು ಕಬ್ಬು ಬೆಳೆದಿದ್ದಾರೆ. ನಮ್ಮ ಜಿಲ್ಲೆಯಲ್ಲಿರುವ 5 ಕಬ್ಬಿನ ಕಾರ್ಖಾನೆಯಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅತೀ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಅದರಿಂದ ನಾವು ಮೊದಲು ಈ ಕಾರ್ಖಾನೆಗೆ ಮತ್ತಿಗೆ ಹಾಕಿದ್ದು ಹಂತ ಹಂತವಾಗಿ ಉಳಿದ 4 ಕಾರ್ಖಾನೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.
ಮುಂಗಾರು ಇಲ್ಲದೆ ಸಂಕಷ್ಟದಲ್ಲಿರೋ ರೈತರಿಗೆ 15 ದಿನಗಳಲ್ಲಿ ಬಾಕಿ ಹಣ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟದ ಮಾಡುವುದಾಗಿ ಎಚ್ಚರಿಕೆ ನೀಡಿದರು.