ಮಂಡ್ಯ: 2018 ನವೆಂಬರ್ 24ರಂದು ಜಿಲ್ಲೆಯ ಪಾಂಡವಪುರದ ಕನಗನಮರಡಿ ಎಂಬ ಗ್ರಾಮದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 30 ಜನರು ಸಾವನ್ನಪಿದ್ದರು. ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂ. ಹಣ ಬಂದಿದೆ. ಆದರೆ ಈ ವಿಚಾರ ಈಗ ರಾಜಕೀಯ ತಿರುವು ಪಡೆದು ಚರ್ಚೆಗೆ ಕಾರಣವಾಗಿದೆ. ಇದೀಗ ಎಲ್ಲ ಗೊಂದಲಗಳಿಗೆ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
https://www.facebook.com/permalink.php?story_fbid=2502437746650334&id=100006523990844
ಮಂಡ್ಯದಲ್ಲಿ ಈ ಹಣ ಕೇಂದ್ರ ಸರ್ಕಾರದಿಂದ ಬರಲು ನೂತನ ಸಂಸದೆ ಸುಮಲತಾ ಕಾರಣ ಎಂದು ಸುಮಲತಾ ಬೆಂಬಲಿಗರು ಮತ್ತು ಈ ನೆರವು ಬರಲು ಕಾರಣ ರಾಜ್ಯ ಸರ್ಕಾರದ ಸಿಎಂ ಕಾರಣ ಎಂದು ಜೆಡಿಎಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು ನನಗೆ ಆ ಕ್ರೆಡಿಟ್ ಬೇಡ ಎಂದು ಹೇಳಿದ್ದಾರೆ.
ಇಂದು ಜಿಲ್ಲೆಯ ಮಾಚಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರಂತದ ಸಂಗತಿ. ಆ ಕುಟುಂಬಗಳಿಗೆ ಅನುದಾನ ತಲುಪಿರೋದು ಮುಖ್ಯ. ಯಾರು ಕೊಟ್ಟಿದ್ದಾರೆ, ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ. ಆ ರೀತಿ ತಪ್ಪು ಯಾರೂ ಮಾಡಬಾರದು ನಾನಂತೂ ಆ ತಪ್ಪು ಮಾಡೋದಿಲ್ಲ ಎಂದು ಹೇಳಿದ್ದಾರೆ.
ಬಸ್ ದುರಂತವನ್ನು ಪ್ರಚಾರಕ್ಕೆ ಬಳಸೋದು ನನಗಿಷ್ಟ ಇಲ್ಲ. ಹಿಂದೆಯಿಂದಲೂ ನಾನು ಸಾಕಷ್ಟು ಬಾರಿ ಹೇಳಿದ್ದೀನಿ ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು. ಯಾರೇ ಮಾಡಿರಲಿ ಅದನ್ನು ಹೇಳಿಕೊಳ್ಳಬಾರದು. ಈ ವಿಚಾರದಲ್ಲಿ ಯಾರು ಬೇಕಾದರೂ ಕ್ರೆಡಿಟ್ ತೆಗೆದುಕೊಳ್ಳಲಿ ನನಗೆ ಆ ಬಗ್ಗೆ ಬೇಜಾರ್ ಏನೂ ಇಲ್ಲ. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಂಸತ್ ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಬಜೆಟ್‍ನಲ್ಲಿ ಸಾಕಷ್ಟು ನಿರೀಕ್ಷೆ ಇದೆ, ಸಾಕಷ್ಟು ಕೊಡುಗೆ ನೀಡೋ ವಿಶ್ವಾಸ ಇದೆ. ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಮಂಡ್ಯದ ಸಮಸ್ಯೆ ಬಗೆಹರಿಸಲು ಮತ್ತು ಮಂಡ್ಯ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ. ಮಂಡ್ಯದ ಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ರೈತರಿಗೆ ಒಳ್ಳೆಯದಾಗುವಂತ ನಿರ್ಧಾರ ತೆಗೆದುಕೊಂಡರೆ ಸಹಕಾರ ನೀಡುತ್ತೇನೆ. ಇದರ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡಿ ಮಾಹಿತಿ ಪಡೆದು ಯಾವುದು ಸೂಕ್ತ ಅನ್ನೋದನ್ನು ನಂತರ ತೀರ್ಮಾನ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.
https://www.youtube.com/watch?v=XpZzL4RaCWk
ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರದಿಂದ ಮಂಡ್ಯ ನಿರ್ಲಕ್ಷ್ಯ ವಿಚಾರದ ಬಗ್ಗೆ ಕೇಳಿದಾಗ, ಈ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ಈಗಷ್ಟೇ ಚುನಾವಣೆ ಮುಗಿದಿದೆ. ಆ ವೇಳೆ ಸಾಕಷ್ಟು ಭರವಸೆ ಕೂಡ ಕೊಟ್ಟಿದ್ದರು. ಎಲ್ಲಾ ಭರವಸೆ ಈಡೇರಿಸೋ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಏನ್ ಮಾಡುತ್ತಾರೆ ಅನ್ನೋದನ್ನು ಕಾದು ನೋಡೋಣ ಎಂದರು. ಮಣಿಗೆರೆಯಲ್ಲಿ ಮೂವರ ದುರ್ಮರಣ ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಯಾರಿಂದ ಪರಿಹಾರ ಕೊಡಿಸಬೇಕೋ ಅವರಿಂದ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.