ಮೈಸೂರು: ಐದು ವರ್ಷದ ಸರ್ಕಾರದಲ್ಲಿ ರೈತರ, ನಿರುದ್ಯೋಗಿಗಳ ಸಮಸ್ಯೆ ಬಗೆಹರಿದಿಲ್ಲ. ಇನ್ನೂ ದೇಶದ ಆರ್ಥಿಕ ಮಟ್ಟವೂ ಕುಸಿದಿದೆ. ಆದರೆ ಈ ಬಗ್ಗೆ ನಾನು ಸತ್ಯ ಹೇಳಲಾಗದಂತಹ ಪರಿಸ್ಥಿತಿಯಲ್ಲಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿದ್ದರಾಮಯ್ಯ ಅವರು, ಐದು ವರ್ಷದ ಪ್ರಧಾನಿ ಮೋದಿ ಅವರ ಸರ್ಕಾರವನ್ನು ದೇಶದ ಜನರು ಹಾಡಿ ಹೊಗಳಿದ್ದಾರೆ. ಆದರೆ ಜಿಡಿಪಿ ಐದು ವರ್ಷದಲ್ಲಿ ಪಾತಾಳಕ್ಕೆ ಹೋಗಿದೆ. ನಿರುದ್ಯೋಗ ಸಮಸ್ಯೆ, ರೂಪಾಯಿ ಮೌಲ್ಯ ಕುಸಿದಿದೆ. ಆದರೆ ಮೋದಿ ಮೋದಿ ಎನ್ನುತ್ತಾರೆ. ಐದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿಯನ್ನು ಸುಧಾರಿಸಿಲ್ಲ. ಬರೀ ಭಾಷಣ, ಸುಳ್ಳು, ನಾಟಕ ಇವುಗಳಿಂದ ಕಾಲಕಳೆದಿದ್ದಾರೆ ಎಂದು ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಒಬ್ಬನೇ ದೇಶಭಕ್ತ. ಅವನಿಂದಲೇ ದೇಶ ಉಳಿಯುವುದು ಎಂದು ಜನರಲ್ಲಿ ಬಿಂಬಿಸಲಾಗಿದೆ. ಆದರೆ ಈಗ ನೋಡಿ ದೇಶದ ಜಿಡಿಪಿ ಎಷ್ಟು ಕುಸಿದಿದೆ ಅಂತ. ಸತ್ಯ ಹೇಳಲಾಗದಂತ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿಚಾರದಲ್ಲಿ ಸತ್ಯ ಹೇಳುವಂತಿಲ್ಲ. ಪುಲ್ವಾಮಾ ಘಟನೆ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ. ನೋಡಿ ನಮ್ಮ ಪರಿಸ್ಥಿತಿ ಹೇಗಿದೆ. ಇದನ್ನು ಕೂಡ ನಾವು ಪ್ರಶ್ನೆ ಮಾಡಬಾರದಾ? ಸಂವಿಧಾನದಲ್ಲಿ ನಮಗೆ ಪ್ರಶ್ನೆ ಮಾಡುವ ಹಕ್ಕಿಲ್ಲವೇ? ಅವರಿಂದ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಗರಂ ಆಗಿ ಹೇಳಿದರು.
ಐಎಂಎ ವಿಚಾರದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂಬ ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅದನ್ನು ಮಾಧ್ಯಮದ ಮುಂದೆ ಯಾಕೆ ಹೇಳ್ತಿಯಾ? ಹೋಗಿ ಎಸ್‍ಐಟಿ ಮುಂದೆ ಹೇಳಪ್ಪ ಎಂದು ರೋಷನ್ ಬೇಗ್‍ಗೆ ತಿರುಗೇಟು ಕೊಟ್ಟರು. ಇನ್ನೂ ಐಎಂಎ ವಿಚಾರದಲ್ಲಿ ಎಸ್‍ಐಟಿ ರಚನೆ ಆಗಿದೆ. ಹೀಗಾಗಿ ಎಸ್‍ಐಟಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಈ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದರು.