ಧಾರವಾಡ: ಜಿಲ್ಲೆಯಲ್ಲಿ ಮಂಗವೊಂದು ರೌಡಿಸಂ ಆರಂಭಿಸಿದ್ದು, ಈ ರೌಡಿ ಮಂಗ ಮಕ್ಕಳು ಹಾಗೂ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ.
ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಕೋತಿಯ ಹಾವಳಿ ವಿಪರೀತವಾಗಿದೆ. ಕಳೆದ ಒಂದು ತಿಂಗಳಿಂದ ಈ ಕೋತಿ ಬರೋಬ್ಬರಿ 25ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಹಾಗೂ ಮನೆಯ ಮುಂದೆ ಕುಳಿತ ವೃದ್ಧೆಯರನ್ನೇ ಕೋತಿ ಟಾರ್ಗೆಟ್ ಮಾಡಿ ಗಾಯಗೊಳಿಸಿದೆ.
ರೌಡಿ ಮಂಗನ ಭಯದಿಂದ ಗ್ರಾಮದ ಜನರು ಕೈಯಲ್ಲಿ ಕೊಡಲಿ ಅಥವಾ ಕುಡುಗೋಲನ್ನು ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ರೌಡಿ ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ತಜ್ಞ ವ್ಯಕ್ತಿಗಳನ್ನು ಕರೆಸಿದ್ದರೂ ಪ್ರಯೋಜನವಾಗಿಲ್ಲ.
ಸದ್ಯ ಈ ಮಂಗನಿಂದ ಗಾಯಗೊಂಡ ಮಕ್ಕಳು ಹಾಗೂ ವೃದ್ಧೆಯರು ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ರೌಡಿ ಮಂಗ ಹೊಡೆತಕ್ಕೆ ಕೆಲವರು ಕೈಗಳನ್ನ ಮುರಿದುಕೊಂಡಿದರೆ, ಇನ್ನೂ ಕೆಲವರ ಮೈಮೇಲೆ ಎಲ್ಲ ಪರಚಿದ ಗಾಯಗಳಾಗಿವೆ. ಸದ್ಯ ಈ ಮಂಗನನ್ನು ಹಿಡಿಯಲು ತಾಲೂಕು ಪಂಚಾಯ್ತಿ ಅಧಿಕಾರಿಗಳು ಕೂಡ ತಲೆ ಕೆಡಿಸಿಕೊಂಡಿದ್ದಾರೆ.
ಆರಂಭದಲ್ಲಿ ರೌಡಿ ಮಂಗ ಮಾತ್ರ ತೊಂದರೆ ಕೊಡುತ್ತಿದ್ದರೆ ಈಗ ಮೂರು ಕೋತಿಗಳು ಸೇರ್ಪಡೆಯಾಗಿದೆ. ಹೀಗಾಗಿ ಈ ಮಂಗಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ನಾನಾ ಪ್ರಯತ್ನ ನಡೆಸುತ್ತಿದ್ದಾರೆ.