ಉಡುಪಿ: ಇವತ್ತು ದೇಶಾದ್ಯಂತ ಭಾಗೀರಥಿ ಜಯಂತಿಯನ್ನು ಆಚರಿಸಲಾಗುತ್ತದೆ. ಉಡುಪಿ ಮಠದಲ್ಲಿ ಗಂಗಾರತಿ ಆಗುತ್ತಿದ್ದಂತೆ ಪವಾಡ ಎಂಬಂತೆ ಧೋ ಎಂದು ಮಳೆ ಸುರಿದಿದ್ದು ಎಲ್ಲರು ಅಚ್ಚರಿಗೊಂಡಿದ್ದಾರೆ.
ಗಂಗೆ ಶಿವನ ತಲೆಯಿಂದ ಇಳಿದು ಬಂದ ದಿನವನ್ನು ಭಾಗೀರಥಿ ಜಯಂತಿ ಎಂದು ಕರೆಯಲಾಗುತ್ತದೆ. ಉಡುಪಿ ಕೃಷ್ಣಮಠದ ಮಧ್ವ ಸರೋವರದ ತಟದಲ್ಲಿ ಭಾಗೀರಥಿ(ಗಂಗಾದೇವಿ)ಗುಡಿಯಿದೆ. ಪ್ರತಿ ವರ್ಷ ಭಾಗೀರಥಿ ಜನ್ಮದಿನ ಸಂದರ್ಭದಲ್ಲಿ ಮಧ್ವ ಸರೋವರ ತುಂಬಿಕೊಂಡಿರುತ್ತದೆ. ಆದರೆ ಈ ವರ್ಷ ಮುಂಗಾರು ವಿಳಂಬವಾಗಿರುವುದರಿಂದ ಸರೋವರದೊಳಗಿರುವ ಬಾವಿಯಲ್ಲಿ ಮಾತ್ರ ನೀರು ಉಳಿದಿದೆ.
ಈ ಬಾರಿಯೂ ಭಾಗೀರಥಿ ಜಯಂತಿ ಹಿನ್ನೆಲೆಯಲ್ಲಿ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಗಂಗೆಗೆ ಆರತಿಯೆತ್ತಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬರ ನೀಗಿ- ವರ್ಷಧಾರೆಯಾಗಿ ರೈತರರು ಬೆಳೆದ ಬೆಳೆಗಳು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅಷ್ಟಾಗುತ್ತಲೇ ಉಡುಪಿಯಲ್ಲಿ ಧೋ ಅಂತ ಮಳೆ ಸುರಿದಿದೆ.
ಪಲಿಮಾರು ಕಿರಿಯ ಶ್ರೀ, ಅದಮಾರು ಕಿರಿಯ ಸ್ವಾಮೀಜಿ ಸರೋವರದಲ್ಲಿರುವಾಗಲೇ ಮಳೆ ಸುರಿದಿದ್ದು ವಿಶೇಷವಾಗಿತ್ತು. ಭಾಗೀರಥಿ ಪೂಜೆ ಬಳಿಕ ಉಡುಪಿಯಲ್ಲಿ ಭಾರೀ ಗಾಳಿ ಮಳೆಯಾಗಿ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ. ಭಾಗೀರಥಿ ಜಯಂತಿಯಂದೇ ಮುಂಗಾರು ಆರಂಭವಾಗಿದ್ದು, ನೀರಿನ ಬರ ನೀಗಲಿ, ಮುಂಗಾರು ರಾಜ್ಯದೆಲ್ಲೆಡೆ ಸುರಿಯಲಿ ಅನ್ನೋದು ಜನರ ಆಶಯವಾಗಿದೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪಲಿಮಾರು ಸ್ವಾಮೀಜಿ, ಪ್ರತಿನಿತ್ಯ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸುತ್ತಿದ್ದೇನೆ. ಭಾಗೀರಥಿ ಜನ್ಮದಿನದ ಆಚರಣೆ ಸಂದರ್ಭದಲ್ಲೇ ಮಳೆಯಾಗಿದೆ. ಇದು ಶುಭ ಸೂಚನೆ, ದೇಶ, ರಾಜ್ಯದಲ್ಲಿ ಗಂಗೆ ಅವತರಿಸಿ ಉತ್ತಮ ಮಳೆಯಾಗಲಿ. ರೈತರ ಹೊಲಗಳಲ್ಲಿ ಸಮೃದ್ಧ ಬೆಳೆಯಾಗಿ ಅವರ ಮುಖಗಳಲ್ಲಿ ಸಂತಸದ ಕಳೆ ಮೂಡಲಿ ಎಂದು ಹೇಳಿದರು.