– ಕರಾವಳಿ, ಮಹಾರಾಷ್ಟ್ರ, ಗುಜರಾತ್‍ನಲ್ಲಿ ಸೈಕ್ಲೋನ್ ಭೀತಿ
ಬೆಂಗಳೂರು: ಸತತ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮುಂಗಾರು ಮಳೆ ಆಶಾದಾಯಕವಾಗಲಿದೆ. ಇಂದಿನಿಂದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದು. ಇನ್ನೂ ಮೂರು ದಿನಗಳ ಒಳಗೆ ರಾಜ್ಯಾದ್ಯಂತ ಮುಂಗಾರು ಮಳೆ ಬೀಳಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇದೇ ವರ್ಷ ಮುಂಗಾರು ಮಳೆ ತಡವಾಗಿದೆ ಅಂತಲೂ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬಿರುಗಾಳಿ ಜೊತೆ ಮಳೆಯ ಆರ್ಭಟ ಪ್ರಾರಂಭವಾಗಿದೆ. ವಾಯುಭಾರ ಕುಸಿತ ಹಾಗೂ ಗಾಳಿಯ ಆರ್ಭಟಕ್ಕೆ ಅರಬ್ಬೀ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಬಿರುಗಾಳಿ ಸಹಿತ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇರೋದ್ರಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದ್ದು ಕಟ್ಟೆಚ್ಚರ ವಹಿಸಲಾಗಿದೆ.
ಇತ್ತ ಕೊಡಗಿನಲ್ಲಿ ರಸ್ತೆಗಳು ಕುಸಿಯುವ ಆತಂಕ ಇರುವ ಹಿನ್ನೆಲೆಯಲ್ಲಿ ಮಳೆಗಾಲ ಮುಗಿಯೋವರೆಗೆ ಭಾರೀ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶಿಸಿದ್ದಾರೆ. ಮರಳು, ಮರದ ದಿಮ್ಮಿ ಸಾಗಾಣಿಕೆ ಹಾಗೂ ಭಾರೀ ವಾಹನ ಸಂಚಾರವನ್ನು ಇಂದಿನಿಂದ ಅಕ್ಟೋಬರ್ 31 ರವರೆಗೆ ನಿಷೇಧಿಸಲಾಗಿದೆ. 16,200 ಕೆಜಿ ಗಿಂತ ಹೆಚ್ಚಿನ ತೂಕದ ಸಾಗಾಟಕ್ಕೆ ಟ್ರಕ್, ಮಲ್ಟಿಆಕ್ಸಲ್, ಬುಲೆಟ್ ಟ್ಯಾಂಕರ್, ಕಾರ್ಗೋ ಕಂಟೈನರ್ಸ್ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಸಾರ್ವಜನಿಕ ಬಸ್ ಗಳು ಮತ್ತು ಸರ್ಕಾರಿ ಕೆಲಸಕ್ಕೆ ಬಳಸುವ ಭಾರೀ ವಾಹನ, ಶಾಲಾ ಕಾಲೇಜು ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
ವಾಯು ಚಂಡಮಾರುತ:
ಮುಂದಿನ 24 ಗಂಟೆಗಳಲ್ಲಿ ‘ವಾಯು’ ಚಂಡಮಾರುತ ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಲಿದ್ದು, ವಾಯು ಚಂಡಮಾರುತದ ಪರಿಣಾಮ ದೇಶದ ಪಶ್ಚಿಮ ಕರಾವಳಿಯುದ್ದಕ್ಕೂ ಗಂಟೆಗೆ 120 ಕಿಮೀ ವೇಗದ ಬಿರುಗಾಳಿ ಬೀಸಿ, ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೇರಳ, ಕರ್ನಾಟಕದ ಕರಾವಳಿ ಜಿಲ್ಲೆಗಳು, ಗುಜರಾತ್‍ನ ಪೋರ್‍ಬಂದರ್, ವೆರಾವಲ್ ಮತ್ತು ಮಹುವಾ ಹಾಗೂ ಕೇಂದ್ರಾಡಳಿತ ಪ್ರದೇಶ ದಿಯುಗೆ ವಿಶೇಷ ಮುನ್ಸೂಚನೆ ನೀಡಿದೆ. ಚಂಡಮಾರುತ ಅಪ್ಪಳಿಸೋ ನಿಟ್ಟಿನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಸಿದ್ಧತೆ ಕುರಿತು ಗೃಹಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಸಂಬಂಧಪಟ್ಟ ಇಲಾಖೆಗಳಿಗೆ ಸಕಲ ಸಿದ್ಧತೆ ನಡೆಸಲು ನಿರ್ದೇಶನ ನೀಡಿದ್ದಾರೆ.