ಬೆಂಗಳೂರು: ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚಿತ್ರ ಹಫ್ತಾ. ವರ್ಧನ್ ತೀರ್ಥಹಳ್ಳಿ ನಾಯಕ ನಟನಾಗಿ ಲಾಂಚ್ ಆಗುತ್ತಿರೋ ಈ ಚಿತ್ರ ಈಗಾಗಲೇ ಪ್ರೇಕ್ಷಕರ ಗಮನವನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಪೋಸ್ಟರ್‍ಗಳ ಮೂಲಕವೇ ಕಡಲ ತಡಿಯ ಭೂಗತ ಲೋಕದ ರೋಚಕ ಸ್ಟೋರಿಯ ಝಲಕ್ ತೋರಿಸಿರುವ ಹಫ್ತಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಬೆರಗಾಗುವಂಥಾ ಮೇಕಿಂಗ್, ಅದಕ್ಕೆ ತಕ್ಕುದಾದ ಪಾತ್ರವರ್ಗ ಮತ್ತು ಖಡಕ್ ಕಥೆಯ ಸುಳಿವಿನ ಮೂಲಕ ಇದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಈಗಾಗಲೇ ಚಿತ್ರರಂಗದ ಗಣ್ಯರೇ ಒಂದಷ್ಟು ಮಂದಿ ಹಫ್ತಾ ಖದರನ್ನು ಕಂಡು ಮೆಚ್ಚಿಕೊಂಡಿದ್ದಾರೆ. ಒಳ್ಳೆ ಮಾತಾಡುತ್ತಲೇ ಶುಭ ಕೋರಿದ್ದಾರೆ. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಹಫ್ತಾದ ಅಂತರಾಳವೇನೆಂಬುದರ ಸ್ಪಷ್ಟ ಸೂಚನೆ ನೀಡಿದೆ. ಕರಾವಳಿ ತೀರದಲ್ಲಿನ ಮಾಫಿಯಾ ಜಗತ್ತಿನ ಸುತ್ತ ಅತ್ಯಾಕರ್ಷಕ ಕಥೆ ಚಿತ್ರವಿಚಿತ್ರ ಪಾತ್ರಗಳ ಮೂಲಕ ಅನಾವರಣಗೊಂಡಿರೋದೂ ಪಕ್ಕಾ ಆಗಿದೆ. ವರ್ಧನ್ ತೀರ್ಥಹಳ್ಳಿ ನಾಯಕನಾಗಿ, ವಿಲನ್ ಆಗಿ ಮಂಗಳಮುಖಿ ಪಾತ್ರದಲ್ಲಿಯೂ ಅಬ್ಬರಿಸಿದ ರೀತಿ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ.
ಈ ಮೂಲಕವೇ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಯಾರೂ ಮುಟ್ಟದ ಕಥೆಯೊಂದನ್ನು ಎತ್ತಿಕೊಂಡು ಆರಂಭಿಕ ಹೆಜ್ಜೆಗಳಲ್ಲಿಯೇ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೈತ್ರಿ ಮಂಜುನಾಥ್ ಮತ್ತು ಬಾಲರಾಜ್ ಸೇರಿಕೊಂಡು ಈ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆಂಬುದಕ್ಕೂ ಈ ಟ್ರೈಲರ್ ಸಾಕ್ಷಿಯಂತಿದೆ. ಒಟ್ಟಾರೆಯಾಗಿ ಕಡಲ ಕಿನಾರೆಯ ಭೂಗತ ಲೋಕದ ಈ ವಿಶಿಷ್ಟ ಕಥಾನಕ ಭಾರೀ ಗೆಲುವಿನ ರೂವಾರಿಯಾಗೋ ಮುನ್ಸೂಚನೆಯಂತೆ ಈ ಟ್ರೈಲರ್ ಮೂಡಿ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಫ್ತಾ ಬಿಡುಗಡೆಯ ದಿನಾಂಕವೂ ಹೊರಬೀಳಲಿದೆ.