ಗೋರಖ್ಪುರ: ಒಳಚರಂಡಿ ವಿಚಾರವಾಗಿ ಜಗಳವಾಡಿ, ಕುಟುಂಬಸ್ಥರ ಎದುರಲ್ಲೇ 12 ವರ್ಷದ ಬಾಲಕಿ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ಸಂಜೆ ಅಹಿರುಲಿ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ಶುಕ್ರವಾರ ಬೆಳಗ್ಗೆ ಒಳಚರಂಡಿ ವ್ಯವಸ್ಥೆ ನಿರ್ಮಾಣದ ಬಗ್ಗೆ ಬಾಲಕಿಯ ಕುಟುಂಬದೊಂದಿಗೆ ಜಗಳಕ್ಕಿಳಿದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಗಳು ಕೋಪಗೊಂಡಿದ್ದರು. ಸಂಜೆ 6 ಮಂದಿ ಆರೋಪಿಗಳು ಸೇರಿಕೊಂಡು ಬಾಲಕಿಯ ಕುಟುಂಬದ ಕಣ್ಣೆದುರೇ ಆಕೆಯ ಮೇಲೆ ಅತ್ಯಾಚಾರವೆಸೆಗಿ ದುಷ್ಟತನ ಮೆರೆದಿದ್ದಾರೆ.
ಅಲ್ಲದೆ ಈ ವೇಳೆ ಕುಟುಂಬಸ್ಥರು ಈ ಅನ್ಯಾಯವನ್ನು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಬಾಲಕಿಯ ತಾಯಿ ಈ ಘಟನೆ ಕುರಿತು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನೂ ಇಬ್ಬರು ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆರು ಮಂದಿ ಆರೋಪಿಗಳ ವಿರುದ್ಧವೂ ಕೂಡ ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಪೋಕ್ಸೋ ಮತ್ತು ಎಸ್‍ಸಿ/ಎಸ್‍ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಆರ್.ಎನ್ ಮಿಶ್ರಾ ತಿಳಿಸಿದ್ದಾರೆ.