ಶಿವಮೊಗ್ಗ: ಮದುವೆಗೆ ಹೋಗುತ್ತಿದ್ದ ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದು ಕಾರ್ ಚಾಲಕ ಮೃತಪಟ್ಟ ಘಟನೆ ಸಾಗರ ತಾಲೂಕಿನ ಉಳ್ಳೂರು ಕ್ರಾಸ್ ಬಳಿ ನಡೆದಿದೆ.
ಕಿರಣ್ ಮೃತ ಕಾರ್ ಚಾಲಕ. ಮದುವೆಗೆ ಹೊರಟಿದ್ದ ಬಸ್ ಶಿವಮೊಗ್ಗದಿಂದ ಸಾಗರ ಕಡೆ ಹೊರಟಿತ್ತು. ಇತ್ತ ಸಾಗರದಿಂದ ಶಿವಮೊಗ್ಗ ಕಡೆ ಕಾರ್ ಬರುತ್ತಿತ್ತು. ಈ ವೇಳೆ ಚಾಲಕರ ನಿಯಂತ್ರಣ ತಪ್ಪಿ ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ವೇಗವಾಗಿದ್ದ ಬಸ್ ರಸ್ತೆ ಪಕ್ಕದ ಅಂಗನವಾಡಿ, ಅಂಗಡಿಗೆ ನುಗ್ಗಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ಜಖಂ ಆಗಿತ್ತು. ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಕಾರು ಚಾಲಕ ಕಿರಣ್ ಮಾರ್ಗ ಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಬಸ್‍ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.