ಬೆಂಗಳೂರು: ನೆಲಮಂಗಲ ಪಟ್ಟಣದ ಜಕ್ಕಸಂದ್ರದಲ್ಲಿ ಐದು ತಿಂಗಳ ಗರ್ಭಿಣಿ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಳಿನ (22) ಮೃತ ಗರ್ಭಿಣಿ. ಮನೆಯ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ನಳಿನ ಮೂಲತಃ ಮಾಗಡಿ ತಾಲೂಕಿನ ಬಾಣಸವಾಡಿ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಬಸವರಾಜು ಜೊತೆ ಮದುವೆಯಾಗಿದ್ದರು.
ಈಗ ನಳಿನ ಐದು ತಿಂಗಳ ಗರ್ಭಿಣಿಯಾಗಿದ್ದರು. ಆದರೆ ಶುಕ್ರವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಮನೆಯವರು ಹೇಳಿದ್ದಾರೆ.
ಇಂದು ಮುಂಜಾನೆ ಪತಿ ಮತ್ತು ಪಕ್ಕದ ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೃತಳ ಪೋಷಕರು ವರದಕ್ಷಿಣೆ ಕಿರುಕುಳದ ಆರೋಪ ಮಾಡುತ್ತಿದ್ದಾರೆ. ಸದ್ಯಕ್ಕೆ ಮಾಹಿತಿ ತಿಳಿದು ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತಳ ಪತಿ ಬಸವರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.