ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಜ್ವಲ್ ಇದೀಗ ಕೊಂಚವೂ ಬಿಡುವಿಲ್ಲದಂತೆ ಬ್ಯುಸಿಯಾಗಿ ಬಿಟ್ಟಿದ್ದಾರೆ. ವೆರೈಟಿ ವೆರೈಟಿ ಚಿತ್ರ, ಥರ ಥರದ ಪಾತ್ರಗಳು ಸಿಗುತ್ತಿರೋ ಖುಷಿಯಲ್ಲಿರೋ ಪ್ರಜ್ವಲ್ ಪಾಲಿಗೆ ಮತ್ತಷ್ಟು ಅವಕಾಶಗಳು ಒಲಿದು ಬರುತ್ತಿವೆ. ಇತ್ತೀಚೆಗಷ್ಟೇ ರಾಮ್ ನಾರಾಯಣ್ ನಿರ್ದೇಶನದ ಚಿತ್ರವೊಂದನ್ನು ಪ್ರಜ್ವಲ್ ಒಪ್ಪಿಕೊಂಡಿದ್ದರು. ಇನ್ನಷ್ಟೇ ಹೆಸರಿಡಬೇಕಿರೋ ಆ ಚಿತ್ರದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಅವರು ಮತ್ತೊಂದು ಚಿತ್ರಕ್ಕೆ ರೆಡಿಯಾಗಿ ಬಿಟ್ಟಿದ್ದಾರೆ.
ಪ್ರಜ್ವಲ್ ದೇವರಾಜ್ ಹೊಸದಾಗಿ ಒಪ್ಪಿಕೊಂಡಿರೋದು ಪಿ.ಸಿ. ಶೇಖರ್ ನಿರ್ದೇಶನದ ಚಿತ್ರವನ್ನು. ಇವರಿಬ್ಬರೂ ಒಟ್ಟಾಗಿ ವರ್ಷಾಂತರಗಳ ಹಿಂದೆ ಅರ್ಜುನ ಎಂಬ ಚಿತ್ರವನ್ನು ಕೊಟ್ಟಿದ್ದರು. ಇದೀಗ ಒಂದು ದೊಡ್ಡ ಗ್ಯಾಪಿನ ನಂತರ ಮತ್ತೆ ಈ ಜೋಡಿ ಒಂದಾಗುತ್ತಿದೆ. ಈಗಾಗಲೇ ಈ ಚಿತ್ರದ ಕಥೆಯನ್ನೂ ಕೇಳಿರೋ ಪ್ರಜ್ವಲ್ ಖುಷಿಯಿಂದಲೇ ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದ ಪಾತ್ರ ತನ್ನ ಇದುವರೆಗಿನ ಸಿನಿಮಾ ಯಾನದಲ್ಲಿಯೇ ಸ್ಪೆಷಲ್ ಆಗಿರೋದು ಮತ್ತು ಅದು ತನ್ನ ಇಮೇಜಿಗೆ ಹೊಸ ಹೊಳಪು ನೀಡೋ ಭರವಸೆ ಹುಟ್ಟಿಕೊಂಡಿರೋದು ಪ್ರಜ್ವಲ್ ಖುಷಿಗೆ ಕಾರಣವಾಗಿದೆ.
ಸದ್ಯ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಸ್ಟ್ರಿಪ್ಟ್ ಕೆಲಸವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತಿರುವ ಶೇಖರ್ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ ಪಾತ್ರ ಹೇಗಿದೆ ಎಂಬ ಬಗ್ಗೆ ಸಣ್ಣ ಹಿಂಟ್ ಕೊಟ್ಟಿದ್ದಾರೆ. ಇದು ರಗಡ್ ಸ್ಟೋರಿ. ಇದರಲ್ಲಿ ಪ್ರಜ್ವಲ್ ಗ್ಯಾಂಗ್‍ಸ್ಟರ್ ಪಾತ್ರದಲ್ಲಿ ಅಬ್ಬರಿಸಲಿದ್ದಾರಂತೆ. ಆದರೆ ವೈಲೆನ್ಸ್ ಅತಿಯಾಗಿರೋದಿಲ್ಲ. ಇಡೀ ಚಿತ್ರವನ್ನು ಮಾಸ್ ಪ್ರೇಕ್ಷಕರ ಜೊತೆಗೆ ಕುಟುಂಬ ಸಮೇತರಾಗಿ ಕೂತು ನೋಡುವಂತೆ ರೂಪಿಸಲು ಶೇಖರ್ ತಯಾರಾಗುತ್ತಿದ್ದಾರೆ.
ಚಂದನ ಸಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಚಂದನ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಪಾಲಿಗೆ ಮೊದಲ ಹೆಜ್ಜೆ. ಪ್ರಜ್ವಲ್ ದೇವರಾಜ್ ಕೂಡಾ ಬಹುಕಾಲದಿಂದ ಇಂಥಾ ಪಾತ್ರಕ್ಕೆ, ಬದಲಾವಣೆಗೆ ಕಾದು ಕೂತಿದ್ದರಂತೆ. ಅದಕ್ಕೆ ತಕ್ಕುದಾದ ಕಥೆಯನ್ನೇ ಪಿ.ಸಿ. ಶೇಖರ್ ಇದೀಗ ರೆಡಿ ಮಾಡಿಕೊಂಡಿದ್ದಾರೆ.