ನೀರಿಗೆ ಬರ – ಸ್ತಬ್ಧವಾಗ್ತಿದೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆ

Public TV
3 Min Read
KWR NAVY

ಕಾರವಾರ: ಏಷ್ಯಾದಲ್ಲಿಯೇ ಮೂರನೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬಾ ನೌಕಾನೆಲೆಗೀಗ ಬರದ ಕರಿ ಛಾಯೆ ತಟ್ಟಿದೆ. ಇಡೀ ನೌಕಾನೆಲೆಗೆ ನೀರಿನ ಕೊರತೆಯಿಂದಾಗಿ ನೌಕಾನೆಲೆಯ ಕೆಲಸಕಾರ್ಯಗಳನ್ನೇ ಬಂದ್ ಮಾಡಲು ನೌಕಾ ದಳ ಹೊರಟಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಭಾರತೀಯ ನೌಕಾದಳವು 11,500 ಎಕರೆ ಪ್ರದೇಶವನ್ನು ಹೊಂದುವ ಮೂಲಕ ಏಷ್ಯಾದಲ್ಲಿಯೇ ಮೂರನೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡಿದೆ. ಹೀಗಾಗಿ ಈ ನೌಕಾನೆಲೆಯಲ್ಲಿ ಫೇಸ್-2 ಹಂತದ ಅಭಿವೃದ್ಧಿ ಕಾರ್ಯಗಳು ನಡೆಯುತಿದ್ದು, ನೌಕಾನೆಲೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.

vlcsnap 2019 06 05 09h59m39s061

ಇಲ್ಲಿಯೇ ದೇಶದ ಅತಿದೊಡ್ಡ ಯುದ್ಧ ನೌಕೆ ವಿಕ್ರಮಾದಿತ್ಯ ಹಡಗು, ಯುದ್ಧ ನೌಕೆಗಳು, ಸಬ್ ಮೆರಿನ್‍ಗಳ ನಿಲ್ದಾಣವಿದೆ. ಹೀಗಾಗಿ ಒಂದು ದಿನಕ್ಕೆ ನೌಕಾನೆಲೆಗೆ ಪ್ರತಿ ದಿನ ಆರು ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ಇದಲ್ಲದೇ ಇಲ್ಲಿನ ಕಾಲೋನಿ, ನಗರವ್ಯಾಪ್ತಿ ಸೇರಿ ಹದಿನೆಂಟು ಮಿಲಿಯನ್ ನೀರು ಒಂದು ದಿನಕ್ಕೆ ಬೇಕಿದೆ. ಈ ನೀರಿಗೆ ಮೂಲ ಅಂಕೋಲ ತಾಲೂಕಿನ ಗಂಗಾವಳಿ ನದಿಯಾಗಿದ್ದು, ಈ ನದಿಯಿಂದಲೇ ಅಂಕೋಲ ಪಟ್ಟಣ ಸೇರಿದಂತೆ ಕಾರವಾರಕ್ಕೂ ನೀರು ಪೂರೈಸಬೇಕು.

ಗಂಗಾವಳಿ ನದಿಯಲ್ಲಿ ಈಗ ಮಳೆ ಬಾರದೆ ಸಂಪೂರ್ಣ ಬತ್ತಿ ಹೋಗಿದ್ದು, ಎಲ್ಲಿಯೂ ನೀರು ಪೂರೈಸದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ನೌಕಾನೆಲೆಗೆ ನಾಲ್ಕು ದಿನಕ್ಕೆ ಒಂದು ಸಾರಿ ನೀರು ಪೂರೈಕೆಯಾಗುತ್ತಿದ್ದು, ಜೂನ್ ಆದರೂ ಮಳೆ ಬಾರದ ಹಿನ್ನೆಲೆಯಲ್ಲಿ ಅದನ್ನೂ ಪೂರೈಕೆ ಮಾಡಲು ಸಾಧ್ಯವಾಗದೆ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಕೈಚೆಲ್ಲಿ ಕುಳಿತಿದೆ. ಹೀಗಾಗಿ ಇನ್ನೆರಡು ದಿನದಲ್ಲಿ ಮಳೆ ಬಾರದಿದ್ದಲ್ಲಿ ನೌಕಾನೆಲೆಯ ಫೇಸ್-2 ಕಾಮಗಾರಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣ ನಿಲ್ಲಿಸಲು ನೌಕಾದಳ ತೀರ್ಮಾನಿಸಿದೆ.

vlcsnap 2019 06 05 09h59m58s672

ನೌಕಾನೆಲೆಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಪೂರೈಸುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ನದಿ ಹರಿಯುವ ಸ್ಥಳದಲ್ಲಿ ಅಳಿದುಳಿದ ನೀರಿಗೆ ಪಂಪ್‍ಗಳನ್ನು ಅಳವಡಿಸಿ ನೀರನ್ನು ಪೂರೈಕೆ ಮಾಡಿದ್ದೇವೆ. ಪ್ರತಿ ದಿನ 6 ಮಿಲಿಯನ್ ನಷ್ಟು ನೀರು ನೌಕಾನೆಲೆಗೆ ಬೇಕಾಗುತ್ತಿದೆ. ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇನ್ನೆರಡು ದಿನದಲ್ಲಿ ಮಳೆ ಬಾರದಿದ್ರೆ ನೌಕಾನೆಲೆಗೆ ನೀರು ಪೂರೈಸಲು ಸಾಧ್ಯವಾಗದು ಎಂದು ನೌಕಾನೆಲೆಗೆ ನೀರು ಪೂರೈಕೆ ಜವಾಬ್ದಾರಿ ಹೊತ್ತಿರುವ ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್ ಸುರೇಶ್ ಹೇಳಿದ್ದಾರೆ.

ನೀರಿಲ್ಲದೆ ನೌಕೆಗಳೇ ಸ್ಥಳಾಂತರ!
ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ಅಂಕೋಲ ತಾಲೂಕಿನಲ್ಲಿರುವ ಗಂಗಾವಳಿ ನದಿಯಿಂದ ನೀರನ್ನು ಹೊನ್ನಳ್ಳಿಗೆ ತಂದು ಶುದ್ಧೀಕರಿಸಲಾಗುತ್ತದೆ. ಬಳಿಕ ನೀರನ್ನು ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕದಂಬ ನೌಕಾನೆಲೆ ಹಾಗೂ ನೌಕಾ ನೆಲೆಯ ವಸತಿ ಗೃಹಕ್ಕೆ ನೀಡಲಾಗುತ್ತದೆ. ಕಳೆದ ಎಂಟು ದಿನದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ 2 ಮಿ.ಲೀಟರ್ ನೀರನ್ನು ನಾಲ್ಕು ದಿನಕ್ಕೆ ಒಂದು ಬಾರಿ ಪೂರೈಕೆ ಮಾಡಿದರೆ ಅಲ್ಪ ನೀರನ್ನು ಟ್ಯಾಂಕರ್ ಮೂಲಕ ಕಾಲೋನಿಗೆ ವಿತರಿಸಲಾಗಿತ್ತು.

vlcsnap 2019 06 05 10h01m24s525

ಆದರೆ ಎರಡು ದಿನದಿಂದ ಅದನ್ನೂ ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಇದರಿಂದಾಗಿ ಯುದ್ಧ ನೌಕೆಗಳಿಗೆ ಹಾಗೂ ಫೇಸ್ -2 ಕಾಮಗಾರಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ನೌಕಾನೆಲೆಯಲ್ಲಿ ನಡೆಯುತ್ತಿದ್ದ ವಿಸ್ತರಣಾ ಕಾರ್ಯಕ್ಕೆ ಅಡ್ಡಿಯಾಗಿದ್ದು, ಕೆಲವು ಭಾಗದಲ್ಲಿ ಕೆಲಸವನ್ನು ನಿಲ್ಲಿಸಲಾಗಿದೆ. ಶುದ್ಧ ಕುಡಿಯುವ ನೀರು ಕೊರತೆಯಿಂದ ಯುದ್ಧ ಹಡಗುಗಳು, ಸಬ್ ಮೆರಿನ್‍ಗಳು ಕಾರವಾರದ ಕದಂಬಾ ನೌಕಾನೆಲೆಯಿಂದ ಮುಂಬೈ ನೌಕಾನೆಲೆಗೆ ತಮ್ಮ ಸ್ಥಾನ ಬದಲಿಸಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜೂನ್ 8 ರೊಳಗೆ ಮಳೆ ಬರುವ ಸೂಚನೆ ನೀಡಿದೆ. ಒಂದು ವೇಳೆ ನಿಗದಿಯಂತೆ ಮಳೆ ಬಾರದಿದ್ದರೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆಯ ಪ್ರಮುಖ ಕಾರ್ಯಗಳು ಸ್ತಬ್ಧವಾಗಲಿವೆ.

Share This Article
Leave a Comment

Leave a Reply

Your email address will not be published. Required fields are marked *