– ರಿಜಿಸ್ಟರ್ ಮ್ಯಾರೇಜ್ ಕೂಡ ನಡೆಯುತ್ತಿಲ್ಲ
ರಾಯಚೂರು: ಪ್ರತಿನಿತ್ಯ ಹತ್ತಾರು ಗ್ರಾಮಗಳ ಜನ, ನಗರದ ಸಾರ್ವಜನಿಕರು ಉಪನೋಂದಣಾಧಿಕಾರಿಗೆ ಬಂದು ಬರಿಗೈಲಿ ವಾಪಸ್ ಹೋಗುತ್ತಿದ್ದಾರೆ. ತಾವು ಕೊಂಡುಕೊಂಡ ಆಸ್ತಿಯನ್ನಾಗಲಿ, ಮಾರಾಟ ಮಾಡಿದ ಆಸ್ತಿಯನ್ನಾಗಲಿ ನೋಂದಣಿ ಮಾಡಿಸಲು ಆಗದೇ ಜನರು ಪರದಾಡುತ್ತಿದ್ದಾರೆ.
ನೋಂದಣಿ ವೇಳೆ ಸಾಕ್ಷಿಹಾಕಲು ಹಳ್ಳಿಗಳಿಂದ ಕರೆದುಕೊಂಡು ಬರುವ ಜನರ ಖರ್ಚು ವೆಚ್ಚ ಭರಿಸಲು ಸಹ ಕಷ್ಟವಾಗುತ್ತಿದೆ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಒಂದು ವಾರದಿಂದ ರಾಯಚೂರಿನ ಹಿರಿಯ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ ಸ್ತಬ್ಧವಾಗಿದೆ. ರಿಜಿಸ್ಟರ್ ಮ್ಯಾರೇಜ್ ಆಗುವವರು ಕೂಡ ತಮ್ಮ ಮದುವೆಯನ್ನು ಮುಂದೂಡಲೇಬೇಕಾಗಿದೆ.
ರಾಯಚೂರಿನ ನೋಂದಣಾಧಿಕಾರಿ ಕಚೇರಿಯಲ್ಲಿ ಇಂಟರ್ ನೆಟ್ ನೆಟ್‍ವರ್ಕ್ ಸಮಸ್ಯೆ ಉಂಟಾಗಿದ್ದು, ಒಂದು ವಾರದಿಂದ ಎಲ್ಲಾ ಕಾರ್ಯ ಸ್ಥಗಿತಗೊಳಿಸಲಾಗಿದೆ. ಇದರಿಂದ ರೋಸಿಹೋದ ವಿವಿಧ ಗ್ರಾಮಗಳ ರೈತರು, ಸಾರ್ವಜನಿಕರು ಕಚೇರಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗಲಾಟೆ ಮಾಡಿದ್ದಾರೆ. ನೋಂದಣಿ ಸೇರಿ ಇತರೆ ಕೆಲಸಗಳು ಸ್ಥಗಿತವಾಗಿರುವುದ್ದಕ್ಕೆ ಜನ ಆಕ್ರೋಶಗೊಂಡಿದ್ದಾರೆ. ಕೂಡಲೇ ನೋಂದಣಿ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಕಚೇರಿಗೆ ಆಗಮಿಸಿದ ರಾಯಚೂರು ತಹಶೀಲ್ದಾರ್ ಡಾ.ಹಂಪಣ್ಣ ಪರಿಸ್ಥಿತಿ ತಿಳಿಗೊಳಿಸಿ ಕೂಡಲೇ ನೆಟ್‍ವರ್ಕ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ನೋಂದಣಿ, ದಾಖಲೆಗಳ ಬದಲಾವಣೆ, ಇಸಿ ಸೇರಿದಂತೆ ಯಾವುದೇ ಸೌಲಭ್ಯಗಳು ಸಿಗದೆ ಜನ ತೊಂದರೆ ಅನುಭವಿಸುತ್ತಿದ್ದಾರೆ.