ಟ್ರ್ಯಾಕ್ಟರ್‌ನಲ್ಲಿ ಹೋದವ ಬೆಳಗ್ಗೆ ಶವವಾಗಿ ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ

Public TV
1 Min Read
collage hsn death 1

ಹಾಸನ: ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಯುವಕನ ಶವವೊಂದು ಶಾಂತಿಗ್ರಾಮ ತಾಲೂಕಿನ ಅದ್ದಿಹಳ್ಳಿ ಬಳಿ ಪತ್ತೆಯಾಗಿದೆ.

ಮೃತ ಯುವಕನನ್ನು ದೇವಿಹಳ್ಳಿ ಗ್ರಾಮದ ಶೇಖರ್(23) ಎಂದು ಗುರುತಿಸಲಾಗಿದೆ. ಇದು ಆಕಸ್ಮಿಕ ಸಾವಲ್ಲ ಯಾರೋ ದುರುದ್ದೇಶದಿಂದ ಕೊಲೆ ಮಾಡಿದ್ದಾರೆ ಎಂದು ಮೃತ ಯುವಕನ ಸಂಬಂಧಿಕರು ಆರೋಪಿಸಿದ್ದಾರೆ.

ಮೃತ ಶೇಖರ್ ಯಾರ ತಂಟೆಗೆ ಹೋದವನಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇದ್ದ. ಆದರೆ ಕಳೆದ ರಾತ್ರಿ ಮನೆಯಲ್ಲಿದ್ದ ಶೇಖರ್‍ ನನ್ನು ಅದೇ ಊರಿನ ಹೊನ್ನಪ್ಪ, ಬಾಬು ಮತ್ತು ಪ್ರದೀಪ ಎಂಬುವರು ಟ್ರ್ಯಾಕ್ಟರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಎಲ್ಲೋ ಹೋಗಿದ್ದಾನೆ ಎಂದು ಮನೆಯವರೂ ಹುಡುಕುವ ಗೋಜಿಗೆ ಹೋಗಿರಲಿಲ್ಲ. ಆದರೆ ಬೆಳಗಾಗುವುದರೊಳಗೆ ಶೇಖರ್ ಅದ್ದಿಹಳ್ಳಿ ಸಮೀಪದ ನಾಲೆಯ ಏರಿ ಬಳಿ ಪಲ್ಟಿಯಾಗಿರುವ ಟ್ರ್ಯಾಕ್ಟರ್ ಕೆಳಗೆ ಹೆಣವಾಗಿ ಸಿಕ್ಕಿದ್ದಾನೆ.

hsn death2

ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಮತ್ತು ಸಂಬಂಧಿಕರು, ಒಂದು ವೇಳೆ ಚಲಿಸುವಾಗ ಟ್ರ್ಯಾಕ್ಟರ್ ಆಯತಪ್ಪಿ ಮಗುಚಿ ಬಿದ್ದಿದ್ದರೆ, ಟ್ರ್ಯಾಕ್ಟರ್‍ ನಲ್ಲಿದ್ದ ಉಳಿದವರಿಗೆ ಏನೂ ಆಗಿಲ್ಲವೇ? ಕೊಲೆ ಮಾಡುವುದಕ್ಕಾಗಿಯೇ ಶೇಖರ್ ಕರೆದುಕೊಂಡು ಹೋಗಿ ಹೀಗೆ ಮಾಡಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಟ್ರ್ಯಾಕ್ಟರ್ ಮಾಲೀಕರು ಕಾಣೆಯಾಗಿದ್ದಾರೆ. ಇನ್ನೊಂದೆಡೆ ಶೇಖರ್ ಬಲಿ ಪಡೆದಿರುವ ಟ್ರ್ಯಾಕ್ಟರ್‍ ಗೆ ವಿಮೆ ಇರಲಿಲ್ಲ ಎಂಬ ಕಾರಣಕ್ಕೆ ಬೇರೊಂದು ಟ್ರ್ಯಾಕ್ಟರ್ ತಂದು ನಿಲ್ಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

hsn death 2 1

ಶೇಖರ್ ಸಾವಿನ ನಂತರ ಮೃತನ ಕಡೆಯವರು ಟ್ರ್ಯಾಕ್ಟರ್ ಮಾಲೀಕರ ಮನೆ ಎದುರು ಗಲಾಟೆ ಮಾಡಿದ್ದು ಸುದ್ದಿ ತಿಳಿದ ಶಾಂತಿಗ್ರಾಮ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *