ಮೈಸೂರು: 2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋತಿದ್ದಕ್ಕೆ ಪೇಜಾವರ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ದೇವೇಗೌಡರು ಮತ್ತು ಖರ್ಗೆಯಂತಹ ಹಿರಿಯ ನಾಯಕರು ಗೆಲ್ಲಬೇಕಾಗಿತ್ತು. ಬಿಜೆಪಿಯನ್ನು ಸೋಲಿಸಬೇಕು ಎಂಬ ಒಂದೇ ಉದ್ದೇಶದಿಂದ ಜೆಡಿಎಸ್-ಕಾಂಗ್ರೆಸ್ ಒಂದಾಗಿದ್ದರಿಂದ ಜನರಲ್ಲಿ ಹಿಂದುತ್ವದ ಭಾವನೆ ಜಾಗೃತವಾಯಿತು. ಅದೇ ಕಾರಣದಿಂದ ಈ ಎಲ್ಲಾ ನಾಯಕರು ಸೋಲಬೇಕಾಗಿ ಬಂತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಪರ ವಕಾಲತ್ತು ವಹಿಸಿದ್ದ ನಾಯಕರು ಗೆಲ್ಲಬಾರದಿತ್ತು. ಅಂತವರು ಗೆದ್ದದ್ದು ನನಗೆ ಅಸಮಾಧಾನವಾಗಿದೆ. ಕಾಶ್ಮೀರ ಸಮಸ್ಯೆಯನ್ನು ಪ್ರಧಾನಿ ಮೋದಿ ಸೌಹಾರ್ದತೆಯಿಂದ ಬಗೆಹರಿಸಬೇಕು. ಅಲ್ಲಿರುವ ಹಿಂದೂ ಮುಸ್ಲಿಮರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹಾಗು 370ನೇ ವಿಧಿ ಅತೀಸೂಕ್ಷ್ಮ ವಿಚಾರ. ಆ ಬಗ್ಗೆ ಚರ್ಚಿಸಲು ನಾನು ಹೋಗುವುದಿಲ್ಲ ಎಂದು ಹೇಳಿದರು.
ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಬಿಜೆಪಿಯ ಜಿ.ಎಸ್.ಬಸವರಾಜು ಜಯಗಳಿಸಿದರೆ, ಕಲಬುರರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯ ವಿರುದ್ಧ ಉಮೇಶ್ ಯಾದವ್ ಜಯಗಳಿಸಿದ್ದಾರೆ.