ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗುತ್ತಿರುವ ಹಿನ್ನೆಲೆಯಲ್ಲಿ ಡಿವಿ ಸದಾನಂದ ಗೌಡರಿಗೆ ಬಿಎಸ್ ಯಡಿಯೂರಪ್ಪ ಷರತ್ತು ವಿಧಿಸಿ ಆಶೀರ್ವಾದಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂಸದರಾದ ಸದಾನಂದ ಗೌಡ ಅವರಿಗೆ ಕರೆ ಮಾಡಿ ಸಂಜೆ 5 ಗಂಟೆಗೆ ಮಾನ್ಯ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸದಾನಂದಗೌಡರು ಆರ್ಶೀವಾದ ಪಡೆದರು.
2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿರುವುದು ಖಚಿತವಾಗುತ್ತಿದಂತೆ ಸದಾನಂದ ಗೌಡರು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಬಿಎಸ್‍ವೈರನ್ನ ಭೇಟಿ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಇತ್ತ ಬಿಎಸ್‍ವೈ, ಸದಾನಂದಗೌಡರಿಗೆ ಸಿಹಿ ತಿನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ವೈ, ಸದಾನಂದಗೌಡರೇ ನಿಮಗೆ ಸಿಹಿ ತಿನಿಸುವ ಮೊದಲು ಒಂದು ಷರತ್ತು ಇದೆ. ನೀವು ದೆಹಲಿಯಲ್ಲಿ ದಿವಂಗತ ಅನಂತಕುಮಾರ್ ಅವರ ಸ್ಥಾನವನ್ನು ತುಂಬಬೇಕು. ಅನಂತಕುಮಾರ್ ಅವರ ರೀತಿಯಲ್ಲೇ ಕೆಲಸ ಮಾಡಬೇಕು. ರಾಜ್ಯದ ಜನರಿಗೆ ದೆಹಲಿಯಲ್ಲಿ ಸ್ಪಂದಿಸಬೇಕು ಎಂದು ಷರತ್ತುಗಳನ್ನು ವಿಧಿಸಿದರು. ಬಿಎಸ್‍ವೈರ ಷರತ್ತುಗಳಿಗೆ ಒಪ್ಪಿಕೊಂಡ ಸದಾನಂದ ಗೌಡರು ಬಳಿಕ ಸಿಹಿ ತಿನ್ನಿಸಿದರು.