ಮಂಡ್ಯ: ಸಕ್ಕರೆ ನಾಡಿನ ಜನತೆಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಇಷ್ಟಪಡುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದಾರೆ.
ಮಂಡ್ಯ ಜನತೆಯ ಮನಸ್ಸಿನಲ್ಲಿ ಅಂಬರೀಶ್ ಇದ್ದಾರೆ. ಈ ಕಾರಣಕ್ಕೆ ಮಂಡ್ಯ ಜನತೆಗೆ ಹ್ಯಾಪಿ ಬರ್ತ್ ಡೇ ಹೇಳುತ್ತೇನೆ. ಇದು ಮಂಡ್ಯ ಜನತೆಯ ಸ್ವಾಭಿಮಾನದ ಗೆಲುವು ಎಂದು ಹೇಳಲು ಇಷ್ಟಪಡುತ್ತೇನೆ ಎಂದು ದರ್ಶನ್ ತಿಳಿಸಿದರು.
ನಟರು ಬಂದ ತಕ್ಷಣ ವೋಟಾಗಿ ಪರಿವರ್ತನೆ ಆಗುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ದರ್ಶನ್ ಅವರು, ನಾವು ನಟರಾಗಿ ಅಲ್ಲ. ಮನೆ ಮಕ್ಕಳಾಗಿ ಬಂದಿಲ್ಲ. ನಟರಾಗಿ ನಾವು ಬಂದಿದ್ದರೆ ಬೇರೆ ಕತೆ ಆಗುತಿತ್ತು. ಜನರು ಕೆಲವೊಂದು ವಿಷಯ ತಪ್ಪು ತಿಳಿದುಕೊಳ್ಳುತ್ತಾರೆ. ಒಬ್ಬ ಕಾರ್ಪೋರೇಟರ್, ಶಾಸಕ ಹಾಗೂ ಸಂಸದರ ಕೆಲಸ ಏನು ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಂಸದರ ಹತ್ತಿರ ಹೋಗಿ ನಮ್ಮ ಮನೆ ಮೋರಿ ಕ್ಲೀನ್ ಮಾಡಿ ಎಂದರೆ ಮಾಡುವುದಕ್ಕೆ ಆಗುವುದಿಲ್ಲ. ಸಂಸದರ ಕೆಲಸ ಏನೇನು ಇರುತ್ತೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾವೇರಿ ವಿಚಾರದ ಬಗ್ಗೆ ಮಾತನಾಡಿದ ದರ್ಶನ್, ಮಗು ಹುಟ್ಟಿ ಈಗ ತಾನೇ 5 ದಿನ ಆಗಿದೆ. ಅವರು ಪ್ರಮಾಣ ವಚನ ಮಾಡಲಿ. ಕಾವೇರಿ ಸಮಸ್ಯೆ ಇವತ್ತು ಮೊನ್ನೆಯದಲ್ಲ ಮೊದಲಿನಿಂದಲೂ ಇದೆ. ಡ್ಯಾಂ ಬತ್ತೋಗಿದೆ. ಈಗ ನೀರು ಬೇಕು ಎಂದು ಹೇಳುತ್ತಾರೆ. ಈಗ ನಾವು ಆ ಕಡೆಯಿಂದ ಪೈಪ್ ಹಾಕಿ ಈ ಕಡೆ ಪಂಪ್ ಮಾಡಬೇಕು. ಅವರು ತಮಗೆ ಎಷ್ಟು ಬೇಕು ಅಷ್ಟು ನೀರು ಬಳಸಿ ಸಮುದ್ರಕ್ಕೆ ಹರಿಸುತ್ತಾರೆ. ಕಳೆದ ಬಾರಿ ಪ್ರವಾಹ ಬಂದಿತ್ತು. ಆಗ ನಾವೇ ಅವರಿಗೆ ನೀರು ಹರಿಸಿದ್ದೇವು ಎಂದು ತಿಳಿಸಿದರು.
ನಾನು ಯಾರಿಗೂ ಏನೂ ಕೊಡಲು ಬಂದಿಲ್ಲ. ಜನರಿಗೆ ಕೃತಜ್ಞತೆ ಹೇಳಲು ಬಂದಿದ್ದೇನೆ. ಚುನಾವಣೆ ಎಂದರೆ ಟೀಕೆ ಟಿಪ್ಪಣಿಗಳು ಸಹಜ. ಈಗ ಚುನಾವಣೆ ಮುಗೀತು ಈಗ ಎಲ್ಲರೂ ಸೇರಿ ಕೆಲಸ ಮಾಡೋಣ. ಸುಮಲತಾ ಅವರು ಎಲ್ಲರೂ ಸೇರಿ ಕೆಲಸ ಮಾಡೋಣ ಎಂಬ ವಿಷಯ ಹೇಳಿದ್ದು ಒಳ್ಳೆಯದು. ನಾನು ಇದುವರೆಗೂ ಯಾವುದೇ ಸರ್ಕಾರಿ ಕೆಲಸ ಮಾಡಿಕೊಡಿ ಎಂದು ಅಪ್ಪಾಜಿ ಬಳಿ ಕೇಳಲಿಲ್ಲ. ಈಗಲೂ ಕೂಡ ಸುಮಲತಾ ಅವರ ಬಳಿ ಏನೂ ಕೇಳುವುದಿಲ್ಲ. ಸುಮಲತಾ ಅವರನ್ನು ಗೆಲ್ಲಿಸಿದ್ದಕ್ಕೆ ನಾನು ಸಾಯೋವರೆಗೆ ಮಂಡ್ಯ ಜನರಿಗೆ ಚಿರಋಣಿ ಆಗಿರುತ್ತೇನೆ ಎಂದು ದರ್ಶನ್ ಈ ವೇಳೆ ಹೇಳಿದರು.