ಬ್ಯಾಟಿಂಗ್ ವೇಳೆ ಬಾಂಗ್ಲಾ ಫೀಲ್ಡ್ ಸೆಟ್ ಮಾಡಿದ ಧೋನಿ – ವಿಡಿಯೋ

Public TV
2 Min Read
DHONI a

ಲಂಡನ್: ವಿಶ್ವಕಪ್ ಅಭ್ಯಾಸ ಪಂದ್ಯ ಸಲುವಾಗಿ ಮಂಗಳವಾರ ಬಾಂಗ್ಲಾದೇಶದ ವಿರುದ್ಧ ಸೆಣಸಿದ ಟೀಂ ಇಂಡಿಯಾ, ಧೋನಿ ಹಾಗೂ ಕೆಎಲ್ ರಾಹುಲ್ ಶತಕ ನೆರವಿನಿಂದ ಗೆದ್ದು ಬೀಗಿತ್ತು. ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಎದುರಾಳಿ ತಂಡದ ಫೀಲ್ಡ್ ಸೆಟ್ ಮಾಡಿ ಸುದ್ದಿಯಾಗಿದ್ದಾರೆ.

ಪಂದ್ಯದ 40ನೇ ಓವರಿನಲ್ಲಿ ಬಾಂಗ್ಲಾ ತಂಡದ ಆಟಗಾರ ಮಿಡ್ ಆಫ್ ಬಳಿ ನಿಂತಿದ್ದರು. ಬೌಲರ್ ಶಬ್ಬೀರ್ ರಹಮಾನ್ ಬೌಲಿಂಗ್ ಹಾಕಲು ಬಂದಾಗ ಧೋನಿ ಅವರನ್ನು ತಡೆದು ಫೀಲ್ಡರ್ ಅನ್ನು ಬೇರೆಡೆ ಕಳುಹಿಸುವಂತೆ ಸೂಚಿಸಿದರು. ಧೋನಿ ಸೂಚನೆಯನ್ನು ಪಾಲಿಸಿದ ಶಬ್ಬೀರ್ ರಹಮಾನ್ ಫೀಲ್ಡರ್ ಅನ್ನು ದೂರ ಸರಿಯುವಂತೆ ಸೂಚಿಸಿದ್ದು, ಫೀಲ್ಡರ್ ಬಳಿಕ ಲೆಗ್ ಸ್ಕ್ಯಾರ್ ಬಳಿ ತೆರಳಿದರು. ಧೋನಿ ಸೂಚನೆಗೆ ವೀಕ್ಷಕ ವಿವರಣೆಗಾರರು ಕೂಡ ಅಚ್ಚರಿಗೊಂಡಿದ್ದರು.

ನಡೆದಿದ್ದು ಏನು?
ಶಬ್ಬೀರ್ ಬೌಲಿಂಗ್ ಮಾಡುತ್ತಿರುವಾಗ ಫೀಲ್ಡರ್ ಸಹ ಮುಂದುಗಡೆ ಬಂದಿದ್ದಾರೆ. ಈ ದೃಶ್ಯವನ್ನು ರಾಹುಲ್ ಮತ್ತು ಧೋನಿ ನೋಡಿದ್ದು ಇಬ್ಬರು ಒಟ್ಟಿಗೆ ಕೈ ಸನ್ನೆ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧೋನಿ ಕ್ರಿಕೆಟಿನಲ್ಲಿ ತೀರ ಮಗ್ನರಾಗಿ ಎದುರಾಳಿ ತಂಡದ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ವಿಡಿಯೋ ಟ್ವೀಟ್ ಮಾಡಿದ್ದಾರೆ.

ನಾಲ್ಕನೇ ಕ್ರಮಾಂಕ: ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕೆಎಲ್ ರಾಹುಲ್ 99 ಎಸೆತಗಳಲ್ಲಿ 12 ಬೌಂಡರಿ, 04 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿ ತಾವು ಈ ಸ್ಥಾನಕ್ಕೆ ಸೂಕ್ತ ಎಂಬುವುದನ್ನು ಸಾಬೀತು ಪಡಿಸಿದರು. ಆ ಮೂಲಕ 2 ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಆಯ್ಕೆದಾರರ ಹುಡುಕಾಟಕ್ಕೆ ಉತ್ತರ ನೀಡಿದರು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಧೋನಿ 78 ಎಸೆತಗಳಲ್ಲಿ 7 ಸಿಕ್ಸರ್, 8 ಬೌಂಡರಿಗಳೊಂದಿಗೆ 113 ರನ್ ಸಿಡಿಸಿದ್ದರು. ರಾಹುಲ್, ಧೋನಿ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ 49.3 ಓವರ್ ಗಳಲ್ಲಿ 264 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲುಂಡಿತು. ಪರಿಣಾಮ ಟೀಂ ಇಂಡಿಯಾ ಬರೋಬ್ಬರಿ 95 ರನ್ ಗಳ ಗೆಲುವು ಪಡೆಯಿತು.

KL RAHUL

Share This Article
Leave a Comment

Leave a Reply

Your email address will not be published. Required fields are marked *