ಕೊಪ್ಪಳ: ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯನ್ನು ಮರೆಯುವ ಈ ಕಾಲದಲ್ಲಿ ಜಗತ್ತಿನ ಜ್ಞಾನವನ್ನೇ ಅರಿಯದ ಮಗ್ಧ ಬಾಲಕಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಆರೈಕೆಯನ್ನು ಮಾಡುತ್ತಿದ್ದಾಳೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಮನಕಲುಕುವ ದೃಶ್ಯ ಕಂಡು ಬಂದಿದೆ.
ಕಾರಟಗಿ ತಾಲೂಕಿನ ಸಿದ್ದಾಪುರದ ದುರ್ಗಮ್ಮ ಎಂಬವರು ಕಳೆದ ನಾಲ್ಕು ದಿನಗಳ ಹಿಂದೆ ತಲೆ ನೋವು ಹಾಗೂ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ದುರ್ಗಮ್ಮ ಅವರ ಪತಿ ಅರ್ಜುನ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ನಾಳೆ ಬರುತ್ತೇನೆಂದು 6 ವರ್ಷದ ಮಗಳು ಭಾಗ್ಯಶ್ರೀಗೆ ಹೇಳಿ ಹೋಗಿದ್ದನು. ಆದರೆ ಆಸ್ಪತ್ರೆಯಲ್ಲಿ ಪತ್ನಿ, ಮಗಳನ್ನು ಬಿಟ್ಟು ಹೋದ ಅರ್ಜುನ್ ಮತ್ತೆ ಹಿಂದಿರುಗಲಿಲ್ಲ. ಹೀಗಾಗಿ ಒಬ್ಬಂಟಿಯಾದ ತಾಯಿಗೆ ಬಾಲಕಿ ಭಾಗ್ಯಶ್ರೀ ಆಸೆರೆಯಾಗಿದ್ದಾಳೆ.
ತಂದೆ ತನ್ನನ್ನು ಹಾಗೂ ತಾಯಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಕಾರಣ ಭಾಗ್ಯಶ್ರೀ ಆಸ್ಪತ್ರೆಯ ಆವರಣ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದಾಳೆ. ಬಳಿಕ ಬಂದ ಹಣದಲ್ಲಿ ತಾಯಿಗೆ ಬೇಕಾದ ಎಳನೀರು, ಹಾಲು ಇನ್ನಿತರ ಪದಾರ್ಥಗಳನ್ನು ತಂದು ಕೊಡುತ್ತಿದ್ದಾಳೆ. ಅಲ್ಲದೆ ಜನರು ಅನ್ನ ಅಥವಾ ರೊಟ್ಟಿಯನ್ನು ಕೊಟ್ಟರೆ ಅದನ್ನು ತನ್ನ ತಾಯಿಗೆ ತಿನ್ನಿಸುತ್ತಾಳೆ. ಊಟ ಮಾಡಿಸುವುದಲ್ಲದೇ ತಾಯಿಯ ತಲೆ ಬಾಚುವುದು, ಸ್ವಚ್ಛಗೊಳಿಸುವ ಕೆಲಸ ಕೂಡ ಭಾಗ್ಯಶ್ರೀ ಮಾಡುತ್ತಿದ್ದಾಳೆ.
ದುರ್ಗಮ್ಮರಿಗೆ ಮಗಳಲ್ಲದೇ ನಾಲ್ಕನೇ ತರಗತಿ ಓದುತ್ತಿರುವ ವೆಂಕಟೇಶ್ ಎಂಬ ಮಗ ಕೂಡ ಇದ್ದಾನೆ. ಭಾಗ್ಯಶ್ರೀ 1ನೇ ತರಗತಿ ಓದುತ್ತಿದ್ದು, ತನ್ನ ತಾಯಿಯ ಆರೈಕೆ ಮಾಡುತ್ತಿದ್ದಾಳೆ. ದುರ್ಗಮ್ಮ ಅವರ ಪರಿಸ್ಥಿತಿ ನೋಡಿ ಆಸ್ಪತ್ರೆಗೆ ದಾಖಲಾಗಿರುವ ಬೇರೆ ರೋಗಿಗಳು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಪತಿ ಅರ್ಜುನ್ ಎರಡನೇ ಮದುವೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ದುರ್ಗಮ್ಮ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ. ದುರ್ಗಮ್ಮರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವುದು ಕಷ್ಟ ಎಂದು ವೈದ್ಯರು ಮನೆಗೆ ಹೋಗಲು ತಿಳಿಸಿದ್ದಾರೆ ಎನ್ನಲಾಗಿದೆ.
ಇತ್ತ ಹಣವಿಲ್ಲದ ಕಾರಣ ಭಾಗ್ಯಶ್ರೀ ಭಿಕ್ಷೆ ಬೇಡಿ ತನ್ನ ತಾಯಿ ದುರ್ಗಮ್ಮರ ಆರೈಕೆ ಮಾಡುತ್ತಿದ್ದಾಳೆ.