ಭುವನೇಶ್ವರ: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಓಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.
ರಾಣಿ ಸೊರೆನ್ ಮೃತ ಮಹಿಳೆ. ಈ ಘಟನೆ ಶುಕ್ರವಾರ ರಾತ್ರಿ ಮಾಧವ್‍ಪುರ್ ಗ್ರಾಮದಲ್ಲಿ ನಡೆದಿದೆ. ಆರೋಪಿ ಖೇಲಾ ಸೊರೆನ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೊಣ್ಣೆಯಿಂದ ಪತ್ನಿ ರಾಣಿ ಸೊರೆನ್‍ಳನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ದಂಪತಿಯ ನಡುವೆ ಜಗಳ ನಡೆಯುತ್ತಿತ್ತು. ಅದೇ ರೀತಿ ಶುಕ್ರವಾರ ರಾತ್ರಿವೂ ಜಗಳ ನಡೆದಿದೆ. ನಂತರ ಆರೋಪಿ ಖೇಲಾ ಕುಡಿದು ಬಂದು ದೊಣ್ಣೆಯಿಂದ ಪತ್ನಿಯ ತಲೆ, ಕಾಲು ಮತ್ತು ಬೆನ್ನಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿ ರಾಣಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತರ ಸಹೋದರ ನಮಗೆ ಮಾಹಿತಿ ತಿಳಿಸಿದ್ದು, ತಕ್ಷಣ ನಾವು ಘಟನೆ ನಡೆದ ಸ್ಥಳಕ್ಕೆ ಹೋದೆವು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರಗೆ ರವಾನೆ ಮಾಡಿ ಈ ಕುರಿತು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.