ಹಾಸನ: ಲೋಕಸಭಾ ಚುನಾವಣೆಯಲ್ಲಿ ನೂತನ ಸಂಸದನಾಗಿ ಆಯ್ಕೆಯಾಗಿದ್ದ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಾರೂ ಬೇಜಾರು ಮಾಡಿಕೊಳ್ಳಬೇಡಿ. ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನು ನಮ್ಮ ನಾಯಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಗೊತ್ತಿಲ್ಲ. ಯಾರಿಗೂ ಕೇಳದೆ ನಾನು ಇದನ್ನು ಮಾಡಿದೆ ಎಂದು ಹೇಳಬೇಡಿ. ಗೌಡರು ನಮ್ಮ ಪಕ್ಷದ ಬೇರು. ದೇವೇಗೌಡರ ಆಶೀರ್ವಾದದೊಂದಿಗೆ ನಾನು ರಾಜೀನಾಮೆ ಕೊಟ್ಟು ಗೌಡರಿಗೆ ಈ ಜಿಲ್ಲೆಯನ್ನು ಬಿಟ್ಟುಕೊಡುತ್ತೇನೆ. ಅವರ ಶಕ್ತಿ ರಾಜ್ಯಕ್ಕೆ ಬೇಕಿದೆ ಎಂದು ಹೇಳಿದರು.
ದೇವೇಗೌಡರನ್ನು ರಾಜಕೀಯದಲ್ಲಿ ಕಳೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ನಾನು ಇಂದು ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸಿ ಜಿಲ್ಲೆಯಲ್ಲಿ ಮತ್ತೆ ಚುನಾವಣೆಗೆ ನಿಲ್ಲಿಸಬೇಕಿದೆ ಎಂದು ಹೇಳುವ ಮೂಲಕ ರಾಜೀನಾಮೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಾತನ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ ಕಮಾಲ್!
ಇದಕ್ಕೂ ಮೊದಲು, ಫಲಿತಾಂಶದಲ್ಲಿ ಒಂದೆಡೆ ಸಂತೋಷ ಆಗುತ್ತಿದೆ. ನಾನು ಚುನಾವಣೆಯಲ್ಲಿ ಗೆದ್ದರೂ ಸಹ ಸೋತಂತೆ ಭಾಸವಾಗುತ್ತಿದೆ. ನನ್ನ ತಂದೆ- ತಾಯಿ ಸ್ಥಾನದಲ್ಲಿ ನಿಲ್ಲಿಸಿದ ಎಲ್ಲರಿಗೂ ಕೃತಜ್ಞತೆ. ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಆಗಿದ್ದೆ. ಎಲ್ಲರೂ ಉತ್ತಮವಾಗಿ ಬೆಂಬಲಿಸಿದ್ದಾರೆ. ಅವರಿಗೂ ಸಹ ಕೃತಜ್ಞತೆ ತಿಳಿಸುತ್ತೇನೆ. ಮಾಧ್ಯಮಗಳ ಮಿತ್ರರೂ ಸಹ ನನಗೆ ಮಾರ್ಗದರ್ಶನ ನೀಡಿದ್ದಾರೆ ಎಂದರು.
ನನ್ನ ಗೆಲುವು ಪ್ರಜ್ವಲ್ ಗೆಲುವು ಅಲ್ಲ. ನಮ್ಮ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಗೆಲುವು. ಇದು ದೇವೇಗೌಡರ ಗೆಲುವು. ಇಲ್ಲಿರೋದು ಅವರ ಶಕ್ತಿ. ನನಗೆ ದುಖ ಆಗುತ್ತಿದೆ. ಹೋರಾಟವೇ ನನ್ನ ಜೀವನ ಎಂದು ಗೌಡರು ಹೇಳಿದ್ದರು. ತುಮಕೂರಿಗೆ ಗೌಡರ ವಿಶೇಷ ಕೊಡುಗೆ ಇದೆ. ಆದರೆ ಕೆಲವು ತುಮಕೂರಿನ ನಾಯಕರು ಅವರ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಹರಿಸಲು ಪರಿಶ್ರಮ ಪಟ್ಟಿದ್ದಾರೆ ಎಂದು ತಮ್ಮ ತಾತನ ಬಗ್ಗೆ ಮಾತನಾಡಿದರು.