ಧಾರವಾಡ: ಅನಾಥಾಶ್ರಮದಲ್ಲಿ ಬೆಳೆದ ಯುವತಿಯನ್ನು ಯುವಕ ಮದುವೆ ಮಾಡಿಕೊಳ್ಳುವ ಮೂಲಕ ಬಾಳನ್ನು ಕೊಟ್ಟಿದ್ದಾರೆ.
ಧಾರವಾಡದ ಮೊಬೈಲ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೀನಿವಾಸ್ ದೇಶಪಾಂಡೆ ಎಂಬವರು ಬೆಳಗಾವಿಯ ಗಂಗಮ್ಮ ಚಿಕ್ಕುಂಬಿಮಠ ಬಾಲ್ಯಕಲ್ಯಾಣ ಅನಾಥಾಶ್ರಮದಲ್ಲಿ ಬೆಳೆದ ಆರತಿ ಪುರಾಣಿಮಠ ಅವರನ್ನು ವರಿಸಿದ್ದಾರೆ.
ಮದುವೆ ಧಾರವಾಡ ನಗರದ ಪ್ರಾಣ ದೇವರ ದೇವಸ್ಥಾನದಲ್ಲಿ ಇಂದು ನಡೆಯಿತು. ಮೂಲತಃ ಮಹಾರಾಷ್ಟ್ರದ ಆರತಿ ಎರಡು ವರ್ಷದವರಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ನಂತರ 10 ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿದ್ದರು.
ತಂದೆ- ತಾಯಿಯನ್ನು ಕಳೆದುಕೊಂಡ ನಂತರ ಅನಾಥಾಶ್ರಮದವರು ಆರತಿ ಅವರಿಗೆ ಆಶ್ರಯ ನೀಡಿದ್ದರು. ಅನಾಥಾಶ್ರಮದ ಪದಾಧಿಕಾರಿಗಳು ಹಾಗೂ ದೇಶಪಾಂಡೆ ಕುಟುಂಬದವರು ಆರತಿ ಬಗ್ಗೆ ಚರ್ಚಿಸಿ ಶ್ರೀನಿವಾಸ್ ದೇಶಪಾಂಡೆ ಅವರ ಜೊತೆ ಮದುವೆ ಮಾಡಿಸಿದರು.
ಈ ಮದುವೆಯಲ್ಲಿ ಭಾಗವಹಿಸಿದ್ದ ಧಾರವಾಡ ಶಾಸಕ ಅರವಿಂದ್ ಬೆಲ್ಲದ ಅವರು ಕೂಡ ಈ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದರು.