ರಾಯಚೂರು: ಭೀಕರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿರುವ ಬಿಸಿಲನಾಡು ರಾಯಚೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗದ ಸೇವೆ ಆರಂಭವಾಗಿದೆ. ಗ್ರಾಮೀಣ ಭಾಗದ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಯಶೋಮಾರ್ಗ ಮುಂದಾಗಿದೆ.
ರಾಯಚೂರು ತಾಲೂಕಿನ ಬಿಜನಗೇರಾ, ಬೋಳಮಾನದೊಡ್ಡಿ, ಬಾಯಿದೊಡ್ಡಿ, ಗೌಶ್ ನಗರದಲ್ಲಿ ಇಂದಿನಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 10 ದಿನಗಳ ವರೆಗೆ ಪ್ರತಿ ಗ್ರಾಮಕ್ಕೆ ಮೂರು ಟ್ರಿಪ್‍ನಂತೆ ನೀರು ಕೊಡಲು ಯಶ್ ಹಾಗೂ ಅವರ ಅಭಿಮಾನಿಗಳು ಮುಂದಾಗಿದ್ದಾರೆ.
ಹತ್ತಿರದಲ್ಲಿ ಲಭ್ಯವಿರುವ ಖಾಸಗಿ ಬೋರ್ ವೆಲ್‍ಗಳಿಂದ ಟ್ಯಾಂಕರ್ ಗೆ ನೀರನ್ನು ತುಂಬಿಸಿಕೊಂಡು ಉಚಿತವಾಗಿ ಕೊಡಲಾಗುತ್ತಿದೆ. ಸದ್ಯ ಎರಡು ಟ್ರ್ಯಾಕ್ಟರ್ ಗಳ ಮೂಲಕ ನೀರು ಸರಬರಾಜು ಆರಂಭಿಸಿದ್ದು, ಮುಂದೆ ಮಳೆ ಬಾರದೇ ಹೋದರೆ ಹೆಚ್ಚು ಸಂಖ್ಯೆಯ ಟ್ಯಾಂಕರ್ ಬಳಸಿಕೊಂಡು ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.
ಸದ್ಯ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಜನ ಯಶೋಮಾರ್ಗದ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.