ಎಕ್ಸಿಟ್ ಪೋಲ್ ಬಳಿಕ ಕಾರ್ಯಕರ್ತರಿಗೆ ಪ್ರಿಯಾಂಕ ಗಾಂಧಿ ಸ್ಫೂರ್ತಿಯ ಸಂದೇಶ

Public TV
2 Min Read
Priyanka Gandhi 1

ನವದೆಹಲಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಬಿಜೆಪಿಯೇತರ ನಾಯಕರು ಎಕ್ಸಿಟ್ ಪೋಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತಮ್ಮ ಕಾರ್ಯಕರ್ತರಿಗೆ ಸ್ಫೂರ್ತಿದಾಯಕ ಆಡಿಯೋ ಸಂದೇಶವನ್ನು ರವಾನಿಸಿದ್ದಾರೆ. ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಎಕ್ಸಿಟ್ ಪೋಲ್ ನತ್ತ ಗಮನ ನೀಡಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Priyanka Gandhi D

ಪ್ರಿಯಾಂಕ ಗಾಂಧಿ ಸಂದೇಶ: ನಮ್ಮೆಲ್ಲರ ಸತತ ಪರಿಶ್ರಮಕ್ಕೆ ಸರಿಯಾದ ಫಲ ಸಿಗಲಿದೆ. ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಸ್ಟ್ರಾಂಗ್ ರೂಮ್ ಮೇಲೆ ನಿಮ್ಮೆಲ್ಲರ ಗಮನ ಇರಲಿ. ಸುಳ್ಳು ಸುದ್ದಿಗಳು ಮತ್ತು ಎಕ್ಸಿಟ್ ಪೋಲ್ ಅಂಕಿ ಅಂಶಗಳನ್ನು ನೋಡಿ ನಿರಾಶದಾಯಕರಾಗಬೇಡಿ. ಇಂತಹ ಸಂದರ್ಭದಲ್ಲಿ ನಿಮ್ಮೆಲ್ಲರ ತಾಳ್ಮೆ ದೊಡ್ಡ ಶಕ್ತಿಯಾಗಿ ಮತ ಎಣಿಕೆ ದಿನ ಕೆಲಸ ಮಾಡಬೇಕಿದೆ. ಸ್ಟ್ರಾಂಗ್ ರೂಮ್ ಮತ್ತು ಮತಗಳ ಎಣಿಕೆ ಸಂದರ್ಭದಲ್ಲಿ ಎಚ್ಚರವಾಗಿರಬೇಕೆಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಮೇ 19ರಂದು ಪ್ರಕಟವಾದ ಚುನಾವಣೋತ್ತರ ಬಹುತೇಕ ಎಲ್ಲ ಸಮೀಕ್ಷೆಗಳು ಕೇಂದ್ರದಲ್ಲಿ ಎನ್‍ಡಿಎ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದಿವೆ. ಹೀಗಾಗಿ ವಿಪಕ್ಷಗಳಲ್ಲಿ ಸಂಚಲನವೇ ಸೃಷ್ಟಿಯಾಗಿದ್ದು, ಹಲವು ನಾಯಕರು ಭಿನ್ನ ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ.

Priyanka Gandhi a

ದೆಹಲಿಯಲ್ಲಿರುವ ಮಾಧ್ಯಮಗಳು ವಿಶ್ವಾಸರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಎಕ್ಸಿಟ್ ಪೋಲ್ ಹೆಸರಿನಲ್ಲಿ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಜನಮತಕ್ಕಾಗಿ ನಾವು ಕಾಯುತ್ತೇವೆ. ಪ್ರಧಾನಿ ಮೋದಿಜಿ ಏಳನೇ ಹಂತದ ಚುನಾವಣೆಗೂ ಮುನ್ನವೇ ಎನ್‍ಡಿಎ ಒಕ್ಕೂಟ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳುತ್ತಾರೆ. ಪೋಲ್ ಸರ್ವೆಗಳ ಅಂಕಿ ಅಂಶಗಳು ಮೋದಿ ಹೇಳಿಕೆಯೊಂದಿಗೆ ಹೋಲಿಕೆಯಾಗುತ್ತಿವೆ. ಇವಿಎಂನಲ್ಲಿ ಮತ್ತೆ ಗೊಂದಲ ಕಾಣುತ್ತಿದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅನುಮಾನ ವ್ಯಕ್ತಪಡಿಸಿದ್ದಾರೆ.

Priyanka Gandhi C

ಇತ್ತ ಟ್ವೀಟ್ ಮೂಲಕ ಸಹ ಅಸಮಾಧಾನ ಹೊರ ಹಾಕಿರುವ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲಾರೆ. ಸಾವಿರಾರು ಇವಿಎಂಗಳು ಬದಲಾವಣೆ ಮಾಡಿರುವ ಸಾಧ್ಯತೆಗಳಿವೆ. ಎಲ್ಲ ವಿರೋಧ ಪಕ್ಷಗಳು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *