ಶಿವಮೊಗ್ಗ: ನಾವು ಬಿಜೆಪಿಯವರು, 104 ಮಂದಿ ಶಾಸಕರುಗಳು, ಹುಲಿಮರಿಗಳ ತರ ಇದ್ದೇವೆ. ಒಬ್ಬನಿಗೆ ಮುಟ್ಟಲು ಬಂದರೂ ಕಚ್ಚುತ್ತೇವೆ. ಹೀಗಾಗಿ ಆಪರೇಷನ್ ಹಸ್ತದ ಮಾತೇ ಇಲ್ಲ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಸಖತ್ ಡೈಲಾಂಗ್ ಹೊಡೆದಿದ್ದಾರೆ.
ಮಾಧ್ಯಮಗಳಿಗೆ ಚುನಾವಣೋತ್ತರ ಸಮೀಕ್ಷೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, 22 ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಸಮೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿ ಸ್ಥಾನ ನೀಡಲಾಗಿದೆ. ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಧೃವಿಕರಣ ನಡೆಯಲಿದೆ ಕಾದು ನೋಡಿ ಎಂದರು.
ದೇಶದ ರಕ್ಷಣೆ ಮಾಡುವಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಶಕ್ತಿ ಇದೆ ಎಂದು ಸಮೀಕ್ಷೆ ಮೂಲಕ ದೇಶದ ಜನ ಹೇಳಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬಿಜೆಪಿ ಬೆಂಬಲಿಸುತ್ತಿರುವುದು ವಿಶೇಷ. ಇಡೀ ದೇಶ ಒಂದಾಗಿ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಸಂತಸ ಪಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟವಾಗಿ ಜೆಡಿಎಸ್ 8 ಕಡೆ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿ 7 ಕಡೆ ಸ್ಪರ್ಧೆ ಮಾಡಿದೆ. ಮೈತ್ರಿ ಹೆಸರಿನಲ್ಲಿ ಸೀಟು ಹಂಚಿಕೆ ಮಾಡುವಾಗಲೇ ಕಿತ್ತಾಡಿಕೊಂಡಿದ್ದಾರೆ. ವ್ಯತಿರಿಕ್ತ ಹೇಳಿಕೆಗಳು ಈಗಲೂ ಮುಂದುವರಿದಿದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ವಿರುದ್ಧವೇ ಕಾಂಗ್ರೆಸ್ ವಿರೋಧಿಸಿದೆ. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಎಲ್ಲಿಯವರೆಗೆ ಇರುತ್ತೆ ಗೊತ್ತಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ಸಿದ್ಧರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೊರಟ್ಟಿ ವಿಧಾನಸಭೆ ವಿಸರ್ಜನೆ ಬಗ್ಗೆ ಮಾತನಾಡುತ್ತಾರೆ. ತಮ್ಮ ಶಾಸಕರ ಹೇಳಿಕೆಗಳ ಬಗ್ಗೆ ಕಂಟ್ರೋಲ್ ಮಾಡದವರು, ತಮ್ಮ ಶಾಸಕರನ್ನು ಹೇಗೆ ಕಂಟ್ರೋಲ್ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಸೋತು ಅಭ್ಯಾಸವಿದೆ. ಆದರೆ, ಅವರಿಗೆ ಸೋತು ಅಭ್ಯಾಸವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸೋಲಿನ ಭಯನೋ ಅಥವಾ ಸರ್ಕಾರ ಬೀಳುವ ಭಯನೋ ಗೊತ್ತಿಲ್ಲ. ಅವರಿಗೆ ಬೇರೆಯವರೊಂದಿಗೆ ಸೇರಿ ಅಧಿಕಾರ ಮಾಡಿ ಗೊತ್ತಿದೆ ಎಂದು ಹೇಳಿದರು.