ನವದೆಹಲಿ: 2016ರ ಸೆಪ್ಟೆಂಬರ್‍ನಲ್ಲಿ ಉರಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‍ನ್ನು ಬಿಟ್ಟರೆ ಅದಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
2016 ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ. 2016ರ ಸೆಪ್ಟೆಂಬರ್ ನಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಭಾರತೀಯ ಸೇನೆಯ ಉತ್ತರ ಕಮಾಂಡಿನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
GOC-in-Chief Northern Command, Lt Gen Ranbir Singh: Few days ago DGMO said in a reply to an RTI that the first surgical strike happened in Sep 16', I don't want to go into what political parties say, they'll be given an answer by government.What I told you is a statement of fact. pic.twitter.com/wDULfMwEfj
— ANI (@ANI) May 20, 2019
ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳು ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿದ್ಯಾ ಎನ್ನುವ ಪ್ರಶ್ನೆ ಕೇಳಿದ್ದಕ್ಕೆ ಅವರು, ಕೆಲ ದಿನಗಳ ಹಿಂದೆ ಮಾಹಿತಿ ಹಕ್ಕು ಕಾಯಿದೆ (ಆರ್ ಟಿ ಐ) ಅಡಿಯಲ್ಲಿ ಬಂದ ಅರ್ಜಿಯೊಂದಕ್ಕೆ ಡೈರೆಕ್ಟರ್ ಆಫ್ ಜನರಲ್ ಮಿಲಿಟರಿ ಆಪರೇಷನ್ (ಡಿಜಿಎಂಒ) ಈ ಪ್ರಶ್ನೆಗೆ ಉತ್ತರ ನೀಡಿದೆ. ರಾಜಕೀಯ ಪಕ್ಷಗಳು ಏನು ಹೇಳಿದೆಯೋ ಅದು ನನಗೆ ಸಂಬಂಧಿಸಿದ ವಿಚಾರವಲ್ಲ. ಡಿಜಿಎಂಒ ಏನು ಉತ್ತರ ನೀಡಿದೆಯೋ ಅದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಜಮ್ಮು- ಕಾಶ್ಮೀರದ ಮಾಹಿತಿ ಹಕ್ಕು ಕಾರ್ಯಕರ್ತ ರೋಹಿತ್ ಚೌಧರಿ ಯುಪಿಎ ಆಡಳಿದ ಅವಧಿಯಲ್ಲಿ(2004 ರಿಂದ 2014) ಗಡಿ ದಾಟಿ ಉಗ್ರರ ಮೇಲೆ ಸರ್ಜಿಕಲ್ ದಾಳಿ ನಡೆಸಲಾಗಿತ್ತೆ? ದಾಳಿ ನಡೆದಿದ್ದರೆ ಈ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಡಿಜಿಎಂಒ ಲಭ್ಯವಿರುವ ದಾಖಲೆಗಳ ಪ್ರಕಾರ 2016ರ ಸೆ.29ಕ್ಕೂ ಮೊದಲು ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಿತ್ತು.
ಮೇ 2 ರಂದು ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಈ ಮೂಲಕ ನಮ್ಮ ಸರ್ಕಾರದ ಕಾಲದಲ್ಲೂ ಉಗ್ರರ ಮರಣಹೋಮ ಮಾಡಿದ್ದೇವೆ. ಈ ದಾಳಿಯನ್ನು ನಾವು ರಾಜಕೀಯವಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಅದರೆ ಮೋದಿ ಅವರ ಸರ್ಕಾರವು ಸೈನ್ಯದ ಶೌರ್ಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎಂದು ದೂರಿದ್ದರು.
2008 ರಿಂದ 2014ರ ವರೆಗೆ ನಡೆದಿರುವ 6 ಸರ್ಜಿಕಲ್ ಸ್ಟ್ರೈಕ್‍ಗಳ ವಿವರಗಳನ್ನು ಚಿತ್ರಗಳ ಸಮೇತ ಮಾಧ್ಯಮಗಳ ಮುಂದೆ ರಾಜೀವ್ ಶುಕ್ಲಾ ಬಿಡುಗಡೆ ಮಾಡಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಕ್ರಿಯಿಸಿ, ಮೋದಿ ದೇಶದಲ್ಲಿ ಆಗಿರುವ ಆರ್ಥಿಕ ಹಿನ್ನಡೆಯನ್ನು ಮರೆಮಾಚಲು ಸೇನೆಯ ಶೌರ್ಯದ ಕಾರ್ಯಗಳ ಬಗ್ಗೆ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.
ಜಮ್ಮು ಕಾಶ್ಮೀರದಲ್ಲಿರುವ ಉರಿ ಸೇನಾ ನೆಲೆಯ ಮೇಲಿನ ಉಗ್ರರ ದಾಳಿ ವೇಳೆ 19 ಯೋಧರು ಹುತಾತ್ಮರಾಗಿದ್ದರು. ಈ ದಾಳಿಗೆ ಪ್ರತೀಕಾರ ಎಂಬಂತೆ ಭಾರತೀಯ ಸೇನೆ ಸೆ.29 ರಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿ ಬಂದಿತ್ತು.