ಬೆಳಗಾವಿ/ಚಿಕ್ಕೋಡಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಇಲ್ಲೊಬ್ಬ ಕಾಂಗ್ರೆಸ್ ಅಭಿಮಾನಿ ತಮ್ಮ ಅಭ್ಯರ್ಥಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ.
ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ನಿವಾಸಿ ಭೀಮಗೌಡ ಬಸಗೌಡ ಅಮ್ಮಣಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ.
ಪ್ರಕಾಶ್ ಹುಕ್ಕೇರಿ ಗೆಲುವಿಗಾಗಿ ಅಕ್ಕಿವಾಟ ಮಲ್ಲಯ್ಯ (ಈಶ್ವರ) ಹರಕೆ ಹೊತ್ತಿದ್ದಾರೆ. ಚುನಾವಣಾ ಮುಗಿದ ದಿನದಿಂದಲೇ ಭೀಮಗೌಡ ಹರಕೆ ಹೊತ್ತಿದ್ದು, ಬಿರು ಬಿಸಿಲಿನಲ್ಲೂ ಚಪ್ಪಲಿ ಇಲ್ಲದೇ ನಡೆದಾಡುತ್ತಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲೂ ಇವರು ಪ್ರಕಾಶ್ ಹುಕ್ಕೇರಿ ಅವರ ಗೆಲುವಿಗಾಗಿ ಇದೇ ರೀತಿಯ ಹರಕೆ ಹೊತ್ತಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕಾಶ್ ಹುಕ್ಕೇರಿ 3,003 ಮತಗಳ ಅಂತರದಿಂದ ಗೆದ್ದಿದ್ದರು. ಈಗ ಮತ್ತೆ ಹರಕೆ ಹೊತ್ತಿದ್ದು, ಅಕ್ಕಿವಾಟ ಮಲ್ಲಯ್ಯ ಮತ್ತೆ ಪ್ರಕಾಶ್ ಹುಕ್ಕೇರಿ ಅವರನ್ನ ಗೆಲ್ಲಿಸುತ್ತಾನೆ ಎನ್ನುವ ವಿಶ್ವಾಸವನ್ನು ಭೀಮಗೌಡ ವ್ಯಕ್ತಪಡಿಸಿದ್ದಾರೆ.