ಶಿವಮೊಗ್ಗ: ರೈತರ ಮಕ್ಕಳಿಗಾಗಿ ಇರುವ ಮೀಸಲಾತಿಯನ್ನು ಸರ್ಕಾರಿ ನೌಕರರು, ಉದ್ಯಮಿಗಳು ಕಬಳಿಸುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಮೀಸಲಾತಿ ಪಡೆಯಲು ಸುಳ್ಳು ಪ್ರಮಾಣಪತ್ರ ಸಲ್ಲಿಸುತ್ತಿರುವುರಿಂದ ನಿಜವಾದ ಕೃಷಿಕರ ಕುಟುಂಬದ ಮಕ್ಕಳಿಗೆ ಸೀಟು ಸಿಗುವುದೇ ದುಸ್ತರವಾಗಿದೆ.
ರಾಜ್ಯದ 6 ವಿಶ್ವವಿದ್ಯಾಲಯಗಳಲ್ಲಿ ಇರುವ ಬಿಎಸ್ಸಿ ಅಗ್ರಿ, ಹಾರ್ಟಿಕಲ್ಚರ್, ಫಾರೆಸ್ಟ್ರೀ, ವೆಟರ್ನರಿ, ಫಿಷರಿಸ್ ಇನ್ನಿತರ ಕೋರ್ಸ್ ಗಳಿಗೆ ಸುಮಾರು ಹತ್ತು ಸಾವಿರ ಇರುವ ಸೀಟುಗಳಿವೆ. ಈ ಹತ್ತು ಸಾವಿರ ಸೀಟುಗಳಿಗೆ ಸುಮಾರು 55-60 ಸಾವಿರ ವಿದ್ಯಾರ್ಥಿಗಳು ಸಿಇಟಿ ಬರೆದಿರುತ್ತಾರೆ. ಅದರಲ್ಲಿ ರೈತರು (ಕೃಷಿ ಕುಟುಂಬದ) ಮಕ್ಕಳಿಗೆ ಶೇ.40 ರಷ್ಟು ಮೀಸಲಾತಿ ಇದೆ. ಈ ಮೀಸಲಾತಿ ಸೌಲಭ್ಯವನ್ನು ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಾರೆ. ಆದರೆ, ಸರ್ಕಾರಿ ಕೆಲಸದಲ್ಲಿದ್ದು, ಬೇರೆ ಉದ್ಯಮಗಳಲ್ಲಿ ತೊಡಗಿದ್ದು, ಶೋಕಿಗೆ ಕೃಷಿ ಮಾಡುತ್ತಿರುವವರೂ ತಮ್ಮ ಮಕ್ಕಳನ್ನು ಈ ಕೃಷಿಕರ ಕೋಟಾದಡಿ ಸೇರಿಸುತ್ತಿದ್ದಾರೆ.
ಕೃಷಿ ಕುಟುಂಬದ ಮೀಸಲಾತಿ ಪಡೆಯುವ ವಿದ್ಯಾರ್ಥಿಯ ಪೋಷಕರ ಅತೀ ಹೆಚ್ಚಿನ ಆದಾಯ ಕೃಷಿಮೂಲದಿಂದಲೇ ಬಂದಿರಬೇಕು. ಈ ಕಾರಣಕ್ಕೆ ತಮ್ಮ ಬೇರೆ ಆದಾಯವನ್ನು ಮುಚ್ಚಿಟ್ಟು ಕೃಷಿಯಿಂದಲೇ ಹೆಚ್ಚು ಆದಾಯ ಬರುತ್ತಿದೆ ಎಂದು ತಹಸೀಲ್ದಾರರಿಂದ ಅಕ್ರಮವಾಗಿ ಆದಾಯ ಪ್ರಮಾಣಪತ್ರ ಪಡೆದು ಸಲ್ಲಿಸುತ್ತಿದ್ದಾರೆ.
ಕೃಷಿ ಕೋಟಾ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇ.50 ರಷ್ಟು ಇದೇ ರೀತಿ ಅಕ್ರಮವಾಗಿ ಪ್ರವೇಶ ಪಡೆದವರೇ ತುಂಬಿದ್ದಾರೆ. ಶಿವಮೊಗ್ಗ ಕೃಷಿ ಕಾಲೇಜಿನಲ್ಲಿ ನಡೆಯುತ್ತಿರುವ ದಾಖಲಾತಿ ಪರಿಶೀಲನೆ ವೇಳೆ ಇಂತಹ ಪ್ರಕರಣಗಳು ಪತ್ತೆಯಾಗಿವೆ. ಅಕ್ರಮವಾಗಿ ಆದಾಯ ಪ್ರಮಾಣಪತ್ರ ಪಡೆದಿರುವ ಸರ್ಕಾರಿ ನೌಕರರು, ಉದ್ಯಮಿಗಳ ಬಗ್ಗೆ ತನಿಖೆ ಆಗಬೇಕು. ಕೃಷಿಯೊಂದನ್ನೇ ಆದಾಯಕ್ಕೆ ನಂಬಿಕೊಂಡಿರುವ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸೀಟುಗಳು ಸಿಗಬೇಕಾಗಿದೆ ಎಂದು ದಾಖಲಾತಿ ಪರಿಶೀಲನಾ ಸಮಿತಿ ಚೇರ್ಮನ್ ಪ್ರೊ.ಗಂಗಪ್ರಸಾದ್ ಹೇಳಿದ್ದಾರೆ.