ಅಧಿಕಾರದಲ್ಲಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಎಚ್‍ಡಿಡಿಯಿಂದ ಪರಿಹಾರ ಆಗ್ತಿತ್ತು: ಪೇಜಾವರ ಶ್ರೀ

Public TV
1 Min Read
udp pejawara

ಉಡುಪಿ: ಸದಾ ಬಿಜೆಪಿ ಪರ ಮಾತನಾಡ್ತಾರೆ ಎಂದು ಟೀಕೆಗೆ ಒಳಪಡುವ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ. ಕಾಶ್ಮೀರ ಸಮಸ್ಯೆ ದೊಡ್ಡ ಗೌಡರಿಂದ ಪರಿಹಾರ ಆಗುತ್ತಿತ್ತು ಎಂದು ಹೇಳಿದ್ದಾರೆ.

ಪೇಜಾವರ ಶ್ರೀಗಳ 88ನೇ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದರು. ಈ ವೇಳೆ ಪರಸ್ಪರ ಆರೋಗ್ಯ ವಿಚಾರಿಸಿಕೊಂಡು, ಗೌರವಾರ್ಪಣೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರು ಅತ್ಯಂತ ಹಿರಿಯರು. ಪ್ರಧಾನ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದರು. ದೇವೇಗೌಡರೇ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯಲು ಅವಕಾಶ ಇತ್ತು ಎಂದು ಹಾಡಿ ಹೊಗಳಿದರು.

udp pejawara 3

ದೇವೇಗೌಡರಿಗೆ ಆಶೀರ್ವಾದ ಮಾಡಿದ್ದೇನೆ. ದೇವೇಗೌಡರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಲು ಕಡಿಮೆ ಅವಧಿ ಸಿಕ್ಕಿತ್ತು. ಆದರೆ ಗೌಡರ ಕುಟುಂಬದಿಂದ ಹೆಚ್ಚಿನ ರಾಷ್ಟ್ರಸೇವೆ ಆಗಲಿ. ನಾವಿಬ್ಬರೂ ರಾಜಕೀಯ ವಿಚಾರ ಮಾತನಾಡಿಲ್ಲ. ಗೌಡರು ಬನ್ನಂಜೆ ಗೋವಿಂದಾಚಾರ್ಯರ, ಮಧ್ವಾಚಾರ್ಯರ ಚರಿತ್ರೆ ಕುರಿತ ಪುಸ್ತಕ ಓದುತ್ತಿದ್ದಾರೆ ಎಂದು ತಿಳಿಸಿದರು.

udp pejawara 2

ಗೌಡರ ಪತ್ನಿ ಚೆನ್ನಮ್ಮ ಅತ್ಯಂತ ಸರಳಜೀವಿ ಮಹಾನ್ ದೈವಭಕ್ತೆ. ಇಬ್ಬರಿಗೂ ಯಾವ ಶ್ರೀಮಂತಿಕೆ, ಆಡಂಭರ ಇಲ್ಲ. ಅಂದೂ ಇಂದೂ ಅದೇ ತರದ ಬಟ್ಟೆ ಧರಿಸುತ್ತಾರೆ ಎಂದು ಪೇಜಾವರ ಸ್ವಾಮೀಜಿ ಭಾರೀ ಪ್ರಶಂಸೆ ವ್ಯಕ್ತಗೊಳಿಸಿದರು. ಅಲ್ಲದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಬಹಳ ಚರ್ಚೆ ಮಾಡಿದ್ದೆವು ಎಂದು ಗೌಡರ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

udp pejawara 1

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, ಸ್ವಾಮೀಜಿಯ ಆಶೀರ್ವಾದ ಪಡೆದಿದ್ದೇನೆ, ಅವರಿಗೆ ಶುಭ ಹಾರೈಸಿದ್ದೇನೆ. ಮೂಳೂರಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದೇನೆ. ರಾಜಕೀಯವಾಗಿ ಮಾತಾಡಲ್ಲ ಎಂದು ಹೇಳಿ ತೆರಳಿದರು. ಅಲ್ಲಿಂದ ಪತ್ನಿ ಸಮೇತರಾಗಿ ಕೃಷ್ಣಮಠಕ್ಕೆ ತೆರಳಿ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿ, ಪರ್ಯಾಯ ಪಲಿಮಾರು ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *