ಕಲಬುರಗಿ: ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.
ಚಿಂಚೋಳಿ ತಾಲೂಕಿನ ರೇವಗ್ಗಿಯಲ್ಲಿ ಸುದ್ದಿಗಾರರ ಜೊತೆ ಮತಾನಾಡಿದ ಅವರು ಕಾಂಗ್ರೆಸ್ ಶಾಸಕರನ್ನು ನಮ್ಮ ಪಕ್ಷಕ್ಕೆ ಕರೆತರಲು ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ನಮ್ಮ ಶಾಸಕರನ್ನು ಬಿಜೆಪಿಯವರು ಕುರಿ, ಕೋಳಿ, ಎಮ್ಮೆ ತರಹ ಖರೀದಿ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟ ಈಶ್ವರಪ್ಪ, ಕಾಂಗ್ರೆಸ್ ಶಾಸಕರು ಖರೀದಿ ವಸ್ತುಗಳೇ? ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಇರುವ ಕಾಂಗ್ರೆಸ್‍ನ ಕೆಲ ಶಾಸಕರು ಬಿಜೆಪಿಗೆ ಬರಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಅವರ ಕಿತ್ತಾಟ ನೋಡಿದರೆ ಅವರಲ್ಲಿ ಸಮನ್ವಯತೆ ಇಲ್ಲ ಎಂದು ಕಾಣುತ್ತದೆ. ಸಿದ್ದರಾಮಯ್ಯನ ಸರ್ವಾಧಿಕಾರಿ ಧೋರಣೆಯಿಂದ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಸ್ಫೋಟವಾಗುತ್ತದೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದ ರಾಜಕೀಯ ದೃವಿಕರಣವಾಗುತ್ತಿದೆ. ಬಿಜೆಪಿಗೆ ಹೆಚ್ಚಿನ ಶಾಸಕರ ಬೆಂಬಲ ಸಿಕ್ಕರೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.