ದಾವಣಗೆರೆ: ಮನುಷ್ಯರನ್ನು ಕಂಡ ತಕ್ಷಣ ದಾಳಿ ಮಾಡುವ ಕರಡಿಗಳು ಜಿಲ್ಲೆಯ ಜಗಳೂರು ತಾಲೂಕಿನ ಕೊಣಚಗಲ್ಲು ರಂಗನಾಥ ದೇವಾಲಯಕ್ಕೆ ಆಗಮಿಸಿ, ಜನರ ಜೊತೆ ಅನ್ಯೋನ್ಯತೆಯಿಂದ ಇರುವುದು ವಿಶೇಷವಾಗಿದೆ.
ಹೌದು. ಪ್ರತಿನಿತ್ಯ ದೇವಾಲಯಕ್ಕೆ ಬರುವ ಕರಡಿಗಳು, ಭಕ್ತರು ನೀಡಿದ ಪ್ರಸಾದ ಸೇವಿಸಿ ಹೋಗುತ್ತವೆ. ಕೊಣಚಗಲ್ಲು ರಂಗನಾಥ ದೇವಾಲಯದ ಬೆಟ್ಟದ ಮುಂದೆ ಮತ್ತೊಂದು ಬೆಟ್ಟವಿದ್ದು ಅಲ್ಲಿ ನೂರಾರು ವರ್ಷಗಳಿಂದ ಕರಡಿಗಳು ವಾಸವಾಗಿವೆ. ಇಲ್ಲಿನ ಮತ್ತೊಂದು ವಿಶೇಷ ಅಂದರೆ ಕಳೆದ ಹಲವು ವರ್ಷಗಳಿಂದ ಕರಡಿಗಳು ಯಾರ ಮೇಲೂ ದಾಳಿ ಮಾಡಿದ ಇತಿಹಾಸವೇ ಇಲ್ಲ. ಜನರನ್ನು ನೋಡಿದ ತಕ್ಷಣ ದಾಳಿ ಮಾಡುವ ಕರಡಿಗಳು ಇಲ್ಲಿ ಮಾತ್ರ ಜನರ ನಡುವೆ ಓಡಾಡಿಕೊಂಡು ಇರುತ್ತವೆ.
ಪುರಾಣಗಳ ಪ್ರಕಾರ ರಂಗನಾಥ ಸ್ವಾಮಿಗೆ ಮಂಗಳಾರತಿ ಮಾಡುತ್ತಿದ್ದಂತೆಯೇ ದೇವಾಲಯದ ಎದುರು ಇರುವ ಬೆಟ್ಟದಿಂದ ಕರಡಿಯೊಂದು ಬಂದು, ದೇವರಿಗೆ ಕೈ ಮುಗಿದು ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿ ಹೋಗುತ್ತಿತ್ತಂತೆ. ಹಾಗಾಗಿ ಇಂದಿಗೂ ಈ ಕರಡಿಗಳು ದೇವಾಲಯದ ಆವರಣಕ್ಕೆ ಬಂದರೆ ಸಾಕು, ಸಾಧು ಸ್ವರೂಪ ಪಡೆದುಕೊಳ್ಳುತ್ತವೆ. ಜೊತೆಗೆ ಭಕ್ತರು ನೀಡಿದ ಪ್ರಸಾದ ಸೇವಿಸಿ ವಾಪಾಸ್ಸಾಗುತ್ತವೆ ಎನ್ನಲಾಗುತ್ತಿದೆ.
ಈ ದೇವಾಲಯಕ್ಕೆ ಬಂದ ಭಕ್ತರು ಕರಡಿಗಳಿಗೆ ಪ್ರಸಾದ ನೀಡುತ್ತಾರೆ. ಜೊತೆಗೆ ಅವುಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತೋಷ ಪಡುತ್ತಾರೆ.