ನವೀನ್ ಪಟ್ನಾಯಕ್ ಅದ್ಭುತ ಕೆಲಸ ಮಾಡಿದ್ದಾರೆ: ಮೋದಿ ಪ್ರಶಂಸೆ

Public TV
1 Min Read
PM Naveen Patnaik

– ಒಡಿಶಾದಲ್ಲಿ ಪ್ರಧಾನಿಯಿಂದ ವೈಮಾನಿಕನ ವೀಕ್ಷಣೆ

ಭುವನೇಶ್ವರ್: ಫೋನಿ ಚಂಡಮಾರುತದ ಉಂಟಾಗಬಹುದಾಗಿದ್ದ ಭಾರೀ ಹಾನಿಯನ್ನು ತಡೆಗಟ್ಟುವಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಮಾನಿಕ ವೀಕ್ಷಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಧಾನಿ ಅವರು, ಒಡಿಶಾದ ಜನತೆ, ಅದರಲ್ಲೂ ಮೀನುಗಾರರು ಸರ್ಕಾರದ ಮುನ್ಸೂಚನೆಯನ್ನು ಪಾಲಿಸಿದ್ದಾರೆ. ಹೀಗಾಗಿ ಪ್ರಾಣಹಾನಿ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರದ ಸೂಚನೆಯನ್ನು ಪಾಲಿಸಿದ ಜನತೆಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.

ಸಂತ್ರಸ್ತರಿಗೆ ಆಹಾರ, ವಸತಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ನಡೆಯುತ್ತಿದೆ. ಒಡಿಶಾ ಸರ್ಕಾರಕ್ಕೆ ಕೇಂದ್ರದಿಂದ ಈಗಾಗಲೇ 1 ಸಾವಿರ ಕೋಟಿ ರೂ. ಸಹಾಯ ನೀಡಲಾಗಿದೆ. ಹೆಚ್ಚುವರಿಯಾಗಿ 1 ಸಾವಿರ ಕೋಟಿ ರೂ. ನೀಡಲಾಗುತ್ತದೆ. ರಕ್ಷಣಾ ಪಡೆ ಸೇರಿದಂತೆ ಎಲ್ಲ ರೀತಿಯ ಸಹಾಯವನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಒಡಿಶಾ ರಾಜ್ಯಪಾಲ ಗಣೇಶಿ ಲಾಲ್, ಸಿಎಂ ನವೀನ್ ಪಟ್ನಾಯಕ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ರಾಜ್ಯ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

ಫೋನಿ ಚಂಡಮಾರುತದ ಅಬ್ಬರಕ್ಕೆ ಒಡಿಶಾ ಕರಾವಳಿ ಪ್ರದೇಶದಲ್ಲಿ ಭಾರೀ ಹಾನಿಯಾಯಾಗಿದ್ದು, 30 ಜನರು ಮೃತಪಟ್ಟಿದ್ದಾರೆ. ಪುರಿ ಜಿಲ್ಲೆಯೊಂದರಲ್ಲಿಯೇ 21 ಮಂದಿ ಸಾವನ್ನಪ್ಪಿದ್ದಾರೆ.

ಫೋನಿ ಚಂಡಮಾರುತವು ಪ್ರತಿ ಗಂಟೆಗೆ 175 ಕಿ.ಮೀ ವೇಗ ಬೀಸಿತ್ತು. ಈ ಮೂಲಕ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಕೂಡ ಆಗಿದೆ. ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಅಪ್ಪಳಿಸಿದ ಅತ್ಯಂತ ಪ್ರಬಲ ಚಂಡಮಾರುತ ಇದಾಗಿದೆ.

ಒಡಿಶಾದ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಕ್ಕೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಹಾಗೂ ತಮಿಳುನಾಡು ಸರ್ಕಾರವು ತಲಾ 10 ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *